ಶಿವಮೊಗ್ಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವತಿಯಿಂದ ನಗರದ ನವುಲೆ ಕೆಎಸ್ಸಿಎ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗೆ ಸೆ.29ರಂದು ಸಂಜೆ 5 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್ಸಿಎ ನಿರ್ದೇಶಕ ಡಿ.ಎಸ್. ಅರುಣ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ವಿವಿಧ ವಯೋಮಾನದ ಕ್ರಿಕೆಟಿಗರಿಗೆ ನಿರಂತರ ಅಭ್ಯಾಸ ನಡೆಸಲು ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯಂತೆ ಶಿವಮೊಗ್ಗದಲ್ಲಿ ಸುಸಜ್ಜಿತ ಒಳಾಂಗಣ ಅಭ್ಯಾಸ ವ್ಯವಸ್ಥೆ ನಿರ್ಮಿಸಲಾಗುತ್ತಿದೆ ಎಂದರು.

ಒಳಾಂಗಣ ಕ್ರೀಡಾಂಗಣಕ್ಕೆ ₹4.90 ಕೋಟಿ ವೆಚ್ಚವಾಗಲಿದ್ದು, ಹೊರಾಂಗಣ ಮೈದಾನದಲ್ಲಿ ಆಡುವ ಅನುಭವ ನೀಡುವ ರೀತಿಯಲ್ಲಿ ಒಳಾಂಗಣ ಟರ್ಫ್ ವ್ಯವಸ್ಥೆ ಹಾಗೂ ನಾಲ್ಕು ಪಿಚ್ಗಳನ್ನು ನಿರ್ಮಿಸಲಾಗುವುದು. ಆಟಗಾರರಿಗೆ ಜಿಮ್ ಸೇರಿದಂತೆ ಅಗತ್ಯ ತರಬೇತಿ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ಹೇಳಿದರು.
ಕೆಎಸ್ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಎಸ್ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ಬಿ.ಎನ್. ಮಧುಕರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು. ಕೆಎಸ್ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್. ಅರುಣ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕ್ರಿಕೆಟ್ ಕ್ಲಬ್ಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
₹5.80 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ: ಕೆಎಸ್ಸಿಎ ಮೈದಾನದ ಸಮೀಪದ ಕೆರೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು ₹5.80 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂದಿನ ಹಂತದ ಅನುಮೋದನೆಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಡಿ.ಎಸ್.ಅರುಣ್, ಕೆಎಸ್ಸಿಎ ನಿರ್ದೇಶಕ
ಶಿವಮೊಗ್ಗವನ್ನು ಕ್ರಿಕೆಟ್ ಹಬ್ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಪಂದ್ಯಾವಳಿ ಹಾಗೂ ತರಬೇತಿ ವ್ಯವಸ್ಥೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ಗೋವಾದ ಮಾಜಿ ಕ್ರಿಕೆಟಿಗರು ಶಿವಮೊಗ್ಗಕ್ಕೆ ಬಂದು ಪಂದ್ಯಗಳನ್ನು ಆಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಇಲ್ಲಿಗೆ ಬಂದು ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರಮುಖರಾದ ನಾಗೇಂದ್ರ ಪಂಡಿತ್, ಸುಕುಮಾರ್ ಪಟೇಲ್, ಶೈಲೇಶ್ ಕುಮಾರ್, ಸುಬ್ರಹ್ಮಣ್ಯ, ಸಂಜಯ್ ಕುಮಾರ್, ಕಿರಣ್, ಯಶವಂತ್ ನಾಯ್ಕ್, ಆರ್. ಪಿ. ನಾಗರಾಜ ಇದ್ದರು.