ಶಿವಮೊಗ್ಗ: ನಗರದಲ್ಲಿ ಜನದಟ್ಟಣೆ ಇರುವ ಪ್ರಮುಖ ವೃತ್ತಗಳಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ಎದುರಿಸುತ್ತಿರುವ ತೊಂದರೆ ತಪ್ಪಿಸಲು ಜಪಾನ್ ಮಾದರಿಯ (Japan style) ಆಧುನಿಕ ಫುಟ್ ಓವರ್ ಬ್ರಿಡ್ಜ್ (ಮೇಲ್ಸೇತುವೆಗಳನ್ನು) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುಗಮ ಸಂಚಾರ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ದೃಷ್ಟಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಂಆರ್‌ಎಸ್ ವೃತ್ತ, ಸಂದೇಶ್ ಮೋಟಾರ್ ವೃತ್ತ, ಮುಖ್ಯ ಬಸ್ ನಿಲ್ದಾಣ ವೃತ್ತ, ಪ್ರವಾಸಿ ಮಂದಿರ ವೃತ್ತ ಮತ್ತು ಗಾಡಿಕೊಪ್ಪ ಸರ್ಕಾರಿ ಶಾಲೆ ಹತ್ತಿರ ಈ ಸೇತುವೆಗಳ ನಿರ್ಮಾಣದ ಸಾಧ್ಯತೆಗಳ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ಸುಬ್ಬಯ್ಯ ಮೆಡಿಕಲ್ ಕಾಲೇಜಿನಿಂದ ಎಂಆರ್‌ಎಸ್ ವೃತ್ತದವರೆಗೆ (ರಾಷ್ಟ್ರೀಯ ಹೆದ್ದಾರಿ 13) ಹಾಗೂ ಹರಿಗೆಯಿಂದ ಸಾಗರ ರಸ್ತೆಯ ಶ್ರೀರಾಂಪುರದವರೆಗೆ (ರಾ.ಹೆ. 206) ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಸಲ್ಲಿಸಿರುವ ಮನವಿಯ ಪ್ರಗತಿ ಬಗ್ಗೆ ಚರ್ಚಿಸಲಾಯಿತು.
ಇದನ್ನೂ ಓದಿ : ಶಿವಮೊಗ್ಗದಿಂದ ಹೊಸ ರೈಲ್ವೆ ಮಾರ್ಗಗಳು, ರೈಲ್ವೆ ಸೌಧದಲ್ಲಿ ಸಂಸದ ರಾಘವೇಂದ್ರ ಮಹತ್ವದ ಮೀಟಿಂಗ್, ಇಲ್ಲಿದೆ ಡಿಟೇಲ್ಸ್
ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ, ರಾಷ್ಟ್ರೀಯ ಹೆದ್ದಾರಿ ಯೋಜನಾ ವಿಭಾಗದ ಮುಖ್ಯಸ್ಥ ಅನುಪ್ ಶರ್ಮಾ, ಇಇ ಲೋಕೇಶ್, ಮೆಸ್ಕಾಂ ಇಇ ವೀರೇಂದ್ರ, ಸಂಚಾರಿ ಪೊಲೀಸ್ ವಿಭಾಗದ ಡಿವೈಎಸ್ಪಿ ಸಂಜೀವ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
