ಶಿವಮೊಗ್ಗ: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಅಕ್ಟೋಬರ್ 11 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಜಿಲ್ಲಾಡಳಿತ ಪಾರದರ್ಶಕ ಹಾಗೂ ಸುಗಮ ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ನಗರದ 22 ಕೇಂದ್ರಗಳಲ್ಲಿ ಒಟ್ಟು 6,588 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಹಿನ್ನೆಲೆ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 163 ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಪರೀಕ್ಷಾರ್ಥಿಗಳನ್ನು ಕೊಠಡಿಗೆ ಬಿಡುವ ಮುನ್ನ ಹಾಲ್ ಟಿಕೆಟ್ ಸ್ಕ್ಯಾನ್ ಹಾಗೂ ಫೇಸ್ ರೆಕಗ್ನಿಷನ್ ಮೂಲಕ ಪರಿಶೀಲಿಸಲಾಗುತ್ತದೆ. ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪ್ರತಿ 5 ಕೇಂದ್ರಗಳಿಗೆ ಒಂದರಂತೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಉಡುಪು ಪರಿಶೀಲನೆಗೆ ಡ್ರೆಸ್ ಕೋಡ್ ಆಫೀಸರ್ ನೇಮಿಸಲಾಗಿದೆ.
ಪ್ರಶ್ನೆಪತ್ರಿಕೆ ರವಾನೆಗೆ 7 ಮಾರ್ಗಗಳನ್ನು ಗುರುತಿಸಿದ್ದು, ತ್ರಿ-ಸದಸ್ಯ ಸಮಿತಿ ಮತ್ತು ಪೊಲೀಸ್ ಭದ್ರತೆಯಲ್ಲಿ ಸಾಗಣೆ ನಡೆಯಲಿದೆ. ಪ್ರತಿ ಕೇಂದ್ರದಲ್ಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಸಮಯದಲ್ಲಿ ತಡೆರಹಿತ ವಿದ್ಯುತ್ ಪೂರೈಸಲು ಮೆಸ್ಕಾಂಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಸಾವಿತ್ರಿ ಹಾಗೂ ವಿವಿಧ ಇಲಾಖೆಗಳ ಪರೀಕ್ಷಾ ಸಿಬ್ಬಂದಿ ಉಪಸ್ಥಿತರಿದ್ದರು.