ಶಿವಮೊಗ್ಗದಲ್ಲಿ ಕಟೀರು ಲೋಕಾರ್ಪಣೆ, ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗ: ಹಿಂದಿನ ತಲೆಮಾರಿನಲ್ಲಿದ್ದ ಕನ್ನಡದ ಬಗೆಗಿನ ಅಭಿಮಾನ, ಭಾಷಾಪ್ರೇಮ ಮತ್ತು ಬದ್ಧತೆ ಇಂದಿನ ತಲೆಮಾರಿನಲ್ಲಿ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಕಳವಳ ವ್ಯಕ್ತಪಡಿಸಿದರು. (ಈ ಸುದ್ದಿಯನ್ನು ಇನ್ನು 64 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ಸಾಹಿತ್ಯ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಜನಪದ ಮತ್ತು ಭಾವಗೀತೆಗಳ ವೃಂದಗಾಯನ ಸಂಭ್ರಮ ಹಾಗೂ ಕೆ.ಎಸ್. ಮಂಜಪ್ಪ ರಚನೆಯ ಕಟೀರು ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Rajyotsava-at-Kannada-Sahitya-Parishad-in-Shimoga.webp

ಕನ್ನಡವನ್ನು ಪ್ರೀತಿಸುವ ಸರ್ಕಾರಗಳು, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ಸಂಖ್ಯೆ ವಿರಳವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕನ್ನಡಕ್ಕೆ ಕನ್ನಡಿಗರೇ ಹಿತಶತ್ರುಗಳಾಗುತ್ತಿದ್ದಾರೆಯೇ ಎಂಬ ಆತಂಕ ಮೂಡುತ್ತಿದೆ. ಮಕ್ಕಳ ಭಾಷಾ ಕಲಿಕೆಯಲ್ಲಿನ ಕೊರತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಹಾಗೂ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.

‘ಕಟೀರು’ ಕಾದಂಬರಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಶಾಂತಾರಾಮ ಪ್ರಭು ಮಾತನಾಡಿ, ಹಿರಿಯ ಸಾಹಿತಿಗಳು ಹಾಗೂ ಬೋಧಕರು ಕನ್ನಡ ಭಾಷೆ-ಸಾಹಿತ್ಯದ ಬೆಳವಣಿಗೆಗೆ ನೀಡಿದ ಮಹತ್ವದ ಕೊಡುಗೆಯನ್ನು ಅವರ ಶಿಷ್ಯ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಹಿರಿಯ ಸಾಹಿತಿ ಪ್ರೊ. ರಾಜೇಂದ್ರ ಚನ್ನಿ ಮಾತನಾಡಿ, ಗ್ರಾಮವೊಂದನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಸಮಾಜದ ಆತ್ಮೀಯತೆ, ಬದುಕಿನ ವೈವಿಧ್ಯ ಹಾಗೂ ಮಾನವ ಸಂಬಂಧಗಳ ಆಳವನ್ನು ಬಿಚ್ಚಿಡುವ ‘ಕಟೀರು’ ಕಾದಂಬರಿ ಒಂದು ಕಾಲಘಟ್ಟದ ಸಾಂಸ್ಕೃತಿಕ ದಾಖಲೆಯಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಚ್.ಟಿ. ಕೃಷ್ಣಮೂರ್ತಿ, ಡಿ.ಎಚ್. ಸೂರ್ಯಪ್ರಕಾಶ್, ಜಿ.ಆರ್. ಲವ, ಆರ್. ರತ್ನಯ್ಯ, ಪ್ರಕಾಶಕ ಬಿ.ಇ. ರವಿ, ಲೇಖಕ ಕೆ.ಎಸ್. ಮಂಜಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.