ಶಿವಮೊಗ್ಗ: ನಿಧನರಾಗಿರುವ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರ ರಾಜಕೀಯ ಜೀವನ, ಹಿನ್ನೆಲೆ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತ ಶಿವಮೊಗ್ಗ ಲೈವ್.ಕಾಂ ಜೊತೆಗೆ ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಮಾತನಾಡಿದರು. ಹೆಚ್.ಎಂ.ಸಿ ಅವರ ಕುರಿತು ಗೊತ್ತಿರಬೇಕಾದ 6 ಪ್ರಮುಖ ಪಾಯಿಂಟ್ಸ್ ಇಲ್ಲಿದೆ.
ಅಪ್ಪಟ ಕಾಂಗ್ರೆಸ್ ಕುಟುಂಬ
ಹೆಚ್.ಎಂ.ಚಂದ್ರಶೇಖರಪ್ಪ ಅವರು ಮೂಲತಃ ತರೀಕೆರೆ ತಾಲೂಕು ಹುಣಸಘಟ್ಟ ಗ್ರಾಮದ ಶ್ರೀಮಂತ ಕೃಷಿಕ ಕುಟುಂಬದವರು. ಇವರ ತಂದೆ ಹೆಚ್.ಎಂ. ಮಲ್ಲಿಕಾರ್ಜುನಪ್ಪ ಅವರು 1978ರಲ್ಲಿ ತರೀಕೆರೆಯಿಂದ ಶಾಸಕರಾಗಿ ಹಾಗೂ KPSC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭೆಯಿಂದ ಸ್ಪರ್ಧಿಸಿದಾಗ ಹೆಚ್.ಎಂ.ಮಲ್ಲಿಕಾರ್ಜುನಪ್ಪ ಅವರು ಚುನಾವಣೆಯ ನೇತೃತ್ವ ವಹಿಸಿದ್ದರು.

ನಗರಸಭೆ ಅಧ್ಯಕ್ಷರಾಗಿದ್ದ ಹಾದಿ
ಶಿವಮೊಗ್ಗಕ್ಕೆ ಬಂದು ನೆಲೆಸಿ ಅಡಿಕೆ ಬೆಳೆಗಾರರಾಗಿ ಹಾಗೂ ವರ್ತಕರಾಗಿ ಗುರುತಿಸಿಕೊಂಡಿದ್ದ ಚಂದ್ರಶೇಖರಪ್ಪ ಅವರು, ತಮ್ಮ ಚಿಕ್ಕಪ್ಪ ಹಾಗೂ ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಎಂ. ಲಿಂಗಮರಿಯಪ್ಪ ಅವರ ಹಾದಿಯಲ್ಲೇ ಸಾಗಿ ತಾವೂ ಸಹ ನಗರಸಭೆ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಗೆಲುವು ಮತ್ತು ಸೋಲಿನ ಅನುಭವ
ಎಸ್. ಬಂಗಾರಪ್ಪ ಅವರ ಬೆಂಬಲದೊಂದಿಗೆ 1999ರಲ್ಲಿ ಶಿವಮೊಗ್ಗ ನಗರದ ಕಾಂಗ್ರೆಸ್ ಟಿಕೆಟ್ ಪಡೆದ ಚಂದ್ರಶೇಖರಪ್ಪ (59,490 ಮತಗಳು) ಅವರು ಬಿಜೆಪಿಯ ಕೆ.ಎಸ್. ಈಶ್ವರಪ್ಪ (52,916 ಮತಗಳು) ವಿರುದ್ಧ ಗೆಲುವು ಸಾಧಿಸಿದ್ದರು. ನಂತರ 2004ರ ಚುನಾವಣೆಯಲ್ಲಿ ಈಶ್ವರಪ್ಪ (69,015 ಮತಗಳು) ವಿರುದ್ಧ ಚಂದ್ರಶೇಖರಪ್ಪ (49,766 ಮತಗಳು) ಪರಾಭವಗೊಂಡಿದ್ದರು.
ಕುಡಿಯುವ ನೀರು, ಆಶ್ರಯ ಬಡಾವಣೆ
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಹೆಚ್.ಎಂ.ಚಂದ್ರಶೇಖರಪ್ಪ ಶಾಸಕರಾಗಿದ್ದರು. ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಯೋಜನೆ, ಗಾಜನೂರಿನಿಂದ ಶಿವಮೊಗ್ಗಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಗ್ರಾಮೀಣ ಭಾಗದ ಕೆರೆ-ರಸ್ತೆಗಳ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ. ದಿನೇಶ್ ಸ್ಮರಿಸಿಕೊಂಡರು.
ಇಬ್ಬರು ಪುತ್ರರು
ಹೆಚ್.ಎಂ.ಚಂದ್ರಶೇಖರಪ್ಪ ಅವರಿಗೆ ಇಬ್ಬರು ಪುತ್ರರಿದ್ದಾರೆ. ಮಾಜಿ ಕಾರ್ಪೊರೇಟರ್ ಹೆಚ್.ಸಿ. ಯೋಗೇಶ್ ಹಾಗೂ ಉದ್ಯಮಿ ಹೆಚ್.ಸಿ. ಶರಣ್ ಆಗಿದ್ದಾರೆ. ಸಹೋದರನ ಪುತ್ರ ಹೆಚ್.ಎಂ. ಮಧು ಅವರು ಪಂಚ ಗ್ಯಾರಂಟಿ ಯೋಜನೆಯ ಶಿವಮೊಗ್ಗ ಅಧ್ಯಕ್ಷರಾಗಿದ್ದಾರೆ.
ಸಾಮಾಜಿಕವಾಗಿ ಸಕ್ರಿಯರಾಗಿದ್ದರು
ರಾಜಕೀಯದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಹೆಚ್ಎಂಸಿ, 2019ರ ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಾಗೂ ವೀರಶೈವ ಲಿಂಗಾಯತ ಸಮಾಜದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.