ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 OCTOBER 2024 : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅ.18 ರಿಂದ 21ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ (Krushi Mela) ಆಯೋಜಿಸಲಾಗಿದೆ. ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ ಎಂಬ ಧ್ಯೇಯವಾಕ್ಯದೊಂದಿಗೆ ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಮೇಳ ಆಯೋಜಿಸಲಾಗುತ್ತಿದೆ.
ಮೇಳದ ಉದ್ಘಾಟನೆಗೆ ಬರ್ತಿದ್ದಾರೆ ಸಿಎಂ
ಅ.18ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಪುಸ್ತಕ ಮತ್ತು ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಂತ್ರಜ್ಞಾನ ಉದ್ಯಾನವನ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಕೆ.ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು ಭಾಗವಹಿಸಲಿದ್ದಾರೆ. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೃಷಿ ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಯ ಸಸ್ಯಕಾಶಿಗಳ ವೀಕ್ಷಣೆಗೆ ಅವಕಾಶವಿದೆ. ನಮ್ಮ ವಿವಿ ವ್ಯಾಪ್ತಿಯ ಏಳು ಜಿಲ್ಲೆಗಳಿಂದ ಕೃಷಿ ಮತ್ತ ತೋಟಗಾರಿಕೆಯಲ್ಲಿ ವಿಶೇಷ ಸಾಧನೆಗೈದ ರೈತರು, ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ವಿವಿಧ ಬೆಳೆ, ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ.
ಡಾ. ಆರ್.ಸಿ.ಜಗದೀಶ್, ಕುಲಪತಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ
ಮೇಳದಲ್ಲಿ ಏನೆಲ್ಲ ಇರುತ್ತೆ?
ತಂತ್ರಜ್ಞಾನ ಉದ್ಯಾನವನ, ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಹೈ-ಟೆಕ್ ತೋಟಗಾರಿಕೆ-ಹೈಡ್ರೊಫೋನಿಕ್ ಕೃಷಿ, ಪುಷ್ಪ ಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾವಯವ ಕೃಷಿ, ಅಣಬೆ ಬೇಸಾಯ, ಸಮಗ್ರ ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿ, ಅಡಿಕೆಯಲ್ಲಿ ಬಹುಸ್ತರೀಯ ಪದ್ಧತಿ, ಅಡಿಕೆ ಬೆಳೆಯ ಸಮಗ್ರ ಕೃಷಿ ಪದ್ಧತಿ, ಪಾರಂಪರಿಕ ಅಡಿಕೆ ಸಂಸ್ಕರಣಾ ಕ್ರಮಗಳು, ಅಡಿಕೆಯ ವಿವಿಧ ತಳಿಗಳು, ಅಡಿಕೆ ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆ, ಕಾರ್ಯಕ್ರಮಗಳು ಇರಲಿವೆ.
ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. 220 ಹೈಟೆಕ್ ಮಳಿಗೆಗಳು, 100 ಎಕಾನಮಿ ಮಳಿಗೆಗಳು, 8 ಮೀನುಗಾರಿಕೆ ಮಳಿಗೆ, 25 ಯಂತ್ರೋಪಕರಣ ಮಳಿಗೆ, 10 ಪಶು ಸಂಗೋಪನೆ ಮಳಿಗೆ, 10 ಆಹಾರ ಮಳಿಗೆ, 12 ನರ್ಸರಿ ಸ್ಥಾಪಿಸಲಾಗುತ್ತದೆ. ಇನ್ನು, ಅ.18, 19 ಮತ್ತು 20ರಂದು ವಿವಿಧ ತಾಂತ್ರಿಕ ಸಮಾವೇಶ ಆಯೋಜಿಸಲಾಗುತ್ತಿದೆ.ವಿವಿಧ ಮಳಿಗೆ, ತಾಂತ್ರಿಕ ಸಮಾವೇಶ
ಇದನ್ನೂ ಓದಿ » ಶಿವಮೊಗ್ಗ – ಚೆನ್ನೈ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?
ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾನಾಯ್ಕ್, ಕೃಷಿ ಡೀನ್ ಡಾ. ತಿಪ್ಪೇಶ್, ವಿವಿಯ ವಿವಿಧ ವಿಭಾಗಗಳ ಉಪಾನ್ಯಾಸಕರು, ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422