ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MARCH 2021
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಮಾಜಿ ಶಾಸಕ ಮಧು ಬಂಗಾರಪ್ಪ ಕೊನೆಗೂ ಮೌನ ಮುರಿದಿದ್ದಾರೆ. ರಾಜಕೀಯ ಬದಲಾವಣೆ ಸಮಯವನ್ನು ನಿಗದಿಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಇರುವ ಮನೆಯಲ್ಲಿ ಇವತ್ತು ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಿಸಿಕೊಂಡರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಬದಲಾವಣೆಗಳು ಶಿವಮೊಗ್ಗದಲ್ಲಿಯೇ ಆಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮೊದಲು
ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಕೇಳಿದ ಪ್ರಶ್ನೆಗೆ, ಹಿತೈಷಿಗಳು, ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಬೇಕಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯೊಳಗೆ ನಿರ್ಧಾರ ಪ್ರಕಟಸುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಇನ್ನು, ಜೆಡಿಎಸ್ ಪಕ್ಷ ಬಿಡಲು ಕಾರಣವೇನು ಎಂದು ಪ್ರಶ್ನಿಸಿದಾಗ, ನಾನಿನ್ನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಬೆಳಸಿದ್ದಾರೆ. ಅವರನ್ನು ಹೆಚ್ಚು ಪ್ರೀತಿಸುತ್ತೇನೆ. ಜೆಡಿಎಸ್ ಬಿಟ್ಟು ಬರುವ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ಎಂದರು.
ಪಕ್ಷದಲ್ಲಿ ನಂಗೇನು ಸಮಸ್ಯೆ ಆಗಿಲ್ಲ, ಆದರೆ
ಜೆಡಿಎಸ್ ಪಕ್ಷದಲ್ಲಿ ತಮಗೇನು ಸಮಸ್ಯೆ ಆಗಿಲ್ಲ. ಆದರೆ ಅಧಿಕಾರದಲ್ಲಿದ್ದಾಗ ಕಾರ್ಯಕರ್ತರಿಗೆ ಅಧಿಕಾರ ಸಿಗಲಿಲ್ಲ. ಶಿವಮೊಗ್ಗದ ಉದಾಹರಣೆಯನ್ನು ಹೇಳುವುದಾದರೆ ಶ್ರೀಕಾಂತ್ ಅವರಿಗೆ ಅಧಿಕಾರ ಕೊಡಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ವೇದಾ ವಿಜಯ ಕುಮಾರ್ ಅವರಿಗೆ ಕೆಲವು ಮಾತು ಕೊಟ್ಟು ಬೆಂಬಲ ಪಡೆದುಕೊಳ್ಳಲಾಯಿತು. ಆದರೆ ಈತನಕ ಆ ಭರವಸೆ ಈಡೇರಿಸಲು ಆಗಲಿಲ್ಲ. ಈ ರೀತಿ ಕೆಲವು ತಪ್ಪುಗಳಾಗಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿದ್ದೆ. ಇದನ್ನು ಕುಮಾರಸ್ವಾಮಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಚುನಾವಣೆ ಬಂದಾಗ ಬದಲಾವಣೆ ತಪ್ಪು
ಚುನಾವಣೆ ಸಂದರ್ಭ ಪಕ್ಷ ಬದಲಾವಣೆಯ ಯೋಚನೆಯಲ್ಲಿದ್ದೀರಾ ಎಂಬ ಪ್ರಶ್ನೆಗೆ, ಚುನಾವಣೆ ವೇಳೆ ಪಕ್ಷ ಬಿಟ್ಟು ಪಕ್ಷ ಸೇರ್ಪಡೆಯಾಗುವುದು ಸರಿಯಲ್ಲ. ಯಾರೂ ಕೂಡ ಆ ರೀತಿ ಮಾಡಬಾರದು. ಬಂಗಾರಪ್ಪ ಅವರು ಒಂದೆರಡು ಬಾರಿ ಹಾಗೆ ಮಾಡಿದ್ದರು. ಅವರಿಗೆ ಆ ಶಕ್ತಿ ಇತ್ತು ಎಂದರು.
ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಾಂಗ್ರೆಸ್ ಮುಖಂಡರೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಎನ್.ರಮೇಶ್, ಎಸ್.ಪಿ.ದಿನೇಶ್ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422