ಶಿವಮೊಗ್ಗ: ಜೂನ್ 5, 6 ಮತ್ತು 7 ರಂದು ಮೂರು ದಿನ ವಿನೋಬನಗರದ 100 ಅಡಿ ರಸ್ತೆಗೆ ಹೊಂದಿಕೊಂಡಿರುವ ಎಪಿಎಂಸಿ ಪ್ರಾಂಗಣದಲ್ಲಿರುವ ಹಾಪ್‌ಕಾಮ್ಸ್ ಮೈದಾನದಲ್ಲಿ ‘ಮಾವು ಮತ್ತು ಹಲಸು ಮೇಳ’ವನ್ನು ಆಯೋಜಿಸಲಾಗಿದೆ.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಆರ್.ವಿಜಯಕುಮಾರ್, ಮೇಳದಲ್ಲಿ ರೈತರಿಂದ ನೇರವಾಗಿ ತಂದ ರಾಸಾಯನಿಕ ಮುಕ್ತ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು ಎಂದು ತಿಳಿಸಿದರು.

30 ಸ್ಟಾಲ್‌ಗಳು, ಪ್ರಸಿದ್ಧ ಮಾವಿನ ತಳಿ
ಜಿಲ್ಲಾ ಹಾಪ್‌ಕಾಮ್ಸ್, ತೋಟಗಾರಿಕೆ ಇಲಾಖೆ, ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ, ರಾಮನಗರದ ಮಾವು ಮತ್ತು ಹಲಸು ಬೆಳೆಗಾರರ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 30 ಸ್ಟಾಲ್‌ಗಳನ್ನು ತೆರೆಯಲಾಗುತ್ತಿದೆ. ಇಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹಣ್ಣುಗಳು ಲಭ್ಯವಾಗಲಿದೆ ಎಂದರು.
ರಾಮನಗರದ ಪ್ರಸಿದ್ಧ ಮಾವಿನ ತಳಿಗಳ ಜೊತೆಗೆ ಹಲಸು, ಹಲಸಿನ ವಿವಿಧ ಉತ್ಪನ್ನಗಳು, ಅನಾನಸ್ ಹಾಗೂ ತಾಜಾ ಮಾವಿನ ಜ್ಯೂಸ್ ಕೂಡ ಮೇಳದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ವಿಜಯ ಕುಮಾರ್ ತಿಳಿಸಿದರು.

“ಜಿಲ್ಲಾ ಹಾಪ್‌ಕಾಮ್ಸ್ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಮುಂದೆ ಹಾಸ್ಟೆಲ್‌ಗಳಿಗೂ ಹಣ್ಣು ವಿತರಿಸುವ ಉದ್ದೇಶ ಹೊಂದಿದೆ. ರೈತರಿಂದ ನೇರ ಖರೀದಿ ಪ್ರಕ್ರಿಯೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ.”
– ವಿಜಯ್ ಕುಮಾರ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ
ಗಾಂಧಿ ಪಾರ್ಕ್ ಬಳಿ ಇರುವ ಹಾಪ್‌ಕಾಮ್ಸ್ ಕಟ್ಟಡದಲ್ಲಿ ಕೋಲ್ಡ್ ಸ್ಟೋರೇಜ್ ಮಾದರಿ ಗ್ಲಾಸ್ ಬಾಕ್ಸ್ ಹೊಂದಿದ ಆಧುನಿಕ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಪ್‌ಕಾಮ್ಸ್ ನಿರ್ದೇಶಕರು ಹಾಗೂ ಪದಾಧಿಕಾರಿಗಳಾದ ಉಂಬ್ಳೆಬೈಲು ಮೋಹನ್, ನಾರಾಯಣಪ್ಪ, ಕಾಂತರಾಜ್, ಅಕ್ಷಯ್, ವಾಸಣ್ಣ, ಸಿದ್ದರಾಜು, ಉಮೇಶ್ ಹಾಗೂ ಶರತ್ ಮರಿಯಪ್ಪ ಉಪಸ್ಥಿತರಿದ್ದರು.
