SHIVAMOGGA LIVE | 19 JULY 2023
SHIMOGA : ಕಳೆದ ಮೂರು ದಿನದಲ್ಲಿ ಅಡಿಕೆ ಧಾರಣೆ (Adike Rate) ದಿಢೀರ್ ಕುಸಿತ ಕಂಡಿದೆ. ಇದರ ಹಿಂದೆ ಉತ್ತರ ಭಾರತದ ವ್ಯಾಪಾರಿಗಳ ಕೈವಾಡವಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಎಂ.ಮಂಜುನಾಥ ಗೌಡ, ಅಡಿಕೆ ಇಳುವರಿ ಮತ್ತು ದಾಸ್ತಾನು ಕಡಿಮೆ ಇದೆ. ಪ್ರಸ್ತುತ 6 ಲಕ್ಷ ಮೂಟೆ ಅಡಿಕೆ ಬೇಕು. ಈಗ 3 ಲಕ್ಷ ಮೂಟೆ ಮಾತ್ರ ದಾಸ್ತಾನು ಇದೆ. ಅಡಿಕೆ ಧಾರಣೆ (Adike Rate) ಪ್ರತಿ ಕ್ವಿಂಟಾಲ್‌ಗೆ 60 ಸಾವಿರ ರೂ. ತನಕ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಕಳೆದ ಮೂರು ದಿನದಿಂದ ಅಡಿಕೆ ಧಾರಣೆ ಕುಸಿತ ಕಂಡಿದೆ. ಇದು ಸಹಜವಾಗಿಯೇ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ ಎಂದರು.
ಉತ್ತರ ಭಾರತದ ವ್ಯಾಪಾರಿಗಳ ಕೈವಾಡ
ಗುಟ್ಕಾ ಸೇರಿದಂತೆ ಯಾವುದೇ ಉತ್ಪನ್ನಗಳ ಬೆಲೆ ಕಡಿಮೆಯಾಗಿಲ್ಲ. ಆದರೆ ಅಡಿಕೆ ಧಾರಣೆ ದಿಢೀರ್ ಕುಸಿತ ಕಂಡಿದೆ. ಇದರ ಹಿಂದೆ ಉತ್ತರ ಭಾರತದ ವ್ಯಾಪಾರಿಗಳ ಕೈವಾಡವಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ. ಅಡಿಕೆಗೆ ಬೆಲೆ ಎಂದಿಗು ಕಡಿಮೆಯಾಗುವುದಿಲ್ಲ. ರೈತರು ಗಡಿಬಿಡಿಯಾಗುವುದು ಬೇಡ ಎಂದು ಸಲಹೆ ನೀಡಿದರು.
ಔಷಧ ಕಂಡು ಹಿಡಿಯುವಲ್ಲಿ ವಿಫಲ
ಮಳೆ ಶುರುವಾಗುತ್ತಲೆ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿದೆ. ಆಗುಂಬೆ ಭಾಗದಲ್ಲಿ ರೋಗ ವ್ಯಾಪಕವಾಗಿದೆ. ತೀರ್ಥಹಳ್ಳಿಯಲ್ಲೆ ಅಡಿಕೆ ಸಂಶೋಧನಾ ಕೇಂದ್ರವಿದೆ. ಆದರೆ ಈತನಕ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕಾಪರ್ ಸಲ್ಫೇಟ್ ಮತ್ತು ಸುಣ್ಣವೆ ಪರಿಹಾರ ಎಂದುಕೊಂಡು ರೈತರು ಬಳಸುತ್ತಿದ್ದಾರೆ. ಆದರೂ 30 ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದವರು ಈಗ ಕೇವಲ 3 ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ – ಶಿವಮೊಗ್ಗದ ಪ್ರಮುಖ ಸರ್ಕಲ್‌ನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ | ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಗೆ ಮನವಿ
ಬೆಂಗಳೂರಿಗೆ ನಿಯೋಗ ಭೇಟಿ
ಎಲೆ ಚುಕ್ಕೆ ರೋಗಕ್ಕೆ ಶೀಘ್ರ ಔಷಧ ಕಂಡು ಹಿಡಿಯದೆ ಹೋದರೆ ಮಲೆನಾಡಿನ ಅಡಿಕೆ ಬೆಳೆಗಾರರು ಸರ್ವನಾಶವಾಗಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಕುರಿತು ಚರ್ಚಿಸುತ್ತೇವೆ. ಅವರ ನೆರವಿನೊಂದಿಗೆ ಮುಖ್ಯಮಂತ್ರಿ ಭೇಟಿಯಾಗಿ ಎಲೆ ಚುಕ್ಕೆ ರೋಗಕ್ಕೆ ಔಷಧ, ರೈತರಿಗೆ ನೆರವು ನೀಡಲು 100 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಡುತ್ತೇವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕ ದುಗ್ಗಪ್ಪಗೌಡ, ಸದಾಶಿವ, ಜಗದೀಶ್, ಜಿ.ಡಿ.ಮಂಜುನಾಥ್, ಸಿದ್ದಪ್ಪ, ಪಿ.ಓ.ಶಿವಕುಮಾರ್, ರಮೇಶ್ ಶಂಕರಘಟ್ಟ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200