ಶಿವಮೊಗ್ಗ: ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಜೊತೆಗೆ ಕೈಜೋಡಿಸಿ ಮರಳಿ ಶಾಲೆಗೆ ಅಭಿಯಾನವನ್ನು ನಡೆಸುತ್ತಿದೆ. ಇದರಡಿ ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಅವರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆಯಲ್ಲಿ ಸಹೋದರರಿಬ್ಬರು ಶಾಲೆ ತೊರೆದಿದ್ದರು. ವಿಷಯ ತಿಳಿದು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಬಿಇಓ ರಮೇಶ್ ಅವರೊಂದಿಗೆ ಅವರ ಮನೆಗೆ ತೆರಳಿದ್ದರು. ಮಕ್ಕಳು ಮತ್ತು ಪೋಷಕರಿಗೆ ಮನವೊಲಿಸಿ ಮತ್ತೆ ಶಾಲೆಗೆ ಕಳುಹಿಸುವಂತೆ ತಿಳಿವಳಿಕೆ ನೀಡಿದ್ದಾರೆ.

ಒಂದು ತಿಂಗಳು, 250 ಮಕ್ಕಳು ಮರಳಿ ಶಾಲೆ
ಇನ್ನು, ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾಹಿತಿ ನೀಡಿದ್ದು, ಈ ವಿಶೇಷ ಅಭಿಯಾನದ ಮೂಲಕ ಒಂದು ತಿಂಗಳ ಅವಧಿಯಲ್ಲಿ 250 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಓದು, ಬರಹದ ಜೊತೆಗೆ ಪೌಷ್ಟಿಕ ಆಹಾರ ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಲು ಹಾಗೂ ತಪ್ಪು ದಾರಿ ಹಿಡಿಯದಂತೆ ಮಾರ್ಗದರ್ಶನ ಸಿಗಲಿದೆ. ವಿಶೇಷವಾಗಿ ನಿದಿಗೆಯಲ್ಲಿ ಸಹೋದರರ ಪೈಕಿ ಒಬ್ಬರ ಕಾಲು ಮುರಿದಿದ್ದರಿಂದ ಅಣ್ಣ ಶಾಲೆಗೆ ಹೋಗುತ್ತಿಲ್ಲ ಎಂಬ ಕಾರಣಕ್ಕೆ ತಮ್ಮನೂ ಶಾಲೆ ಬಿಟ್ಟಿದ್ದ ಪ್ರಕರಣದಲ್ಲಿ, ಇಬ್ಬರನ್ನೂ ಮನವೊಲಿಸಿ ಪರೀಕ್ಷೆ ಕಟ್ಟಿಸಿದ್ದೇವೆ.
– ನಿಖಿಲ್.ಬಿ, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ
ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಕ್ಕಳನ್ನು ಶಾಲೆಗೆ ಸೇರಿಸಿದ ಬಳಿಕವೂ ಆಗಾಗ ಪರಿಶೀಲನೆ ನಡೆಸಲಾಗುತ್ತಿದೆ. ಮಕ್ಕಳು ನಿರಂತರವಾಗಿ ಶಾಲೆಗೆ ಹೋಗುವಂತೆ ಪೋಷಕರು ನೋಡಿಕೊಳ್ಳಬೇಕು. ಒಂದು ವೇಳೆ ಮಕ್ಕಳು ಶಾಲೆಗೆ ಹೋಗದೆ ಇದ್ದರೆ ಶಾಲೆಯ ಶಿಕ್ಷಕರಿಗೆ ಅಥವಾ ಪೊಲೀಸ್ ಬೀಟ್ ಸಿಬ್ಬಂದಿಗೆ ತಿಳಿಸಿದರೆ ಅವರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.