ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ನಿಯೋಗ ಇವತ್ತು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿತ್ತು. ಈ ವೇಳೆ ಹಲವು ನ್ಯೂನತೆಗಳು ಕಂಡು ಬಂದಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಔಷಧ ಕೊರತೆ, ಸಿಬ್ಬಂದಿಗಳಿಗೆ ಸಂಬಳ ವ್ಯತ್ಯಯ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದವು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
2009ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದ್ದರು, ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವ ಈಶ್ವರಪ್ಪ, ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಸೇರಿದಂತೆ ಹಲವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಬಿಪಿ ಮಾತ್ರೆ ನೋ ಸ್ಟಾಕ್
ಸಭೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಅಶೋಕ್ ನಾಯ್ಕ್ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಸಿನ್ ಸ್ಟಾಕ್ ಕುರಿತು ಮಾಹಿತಿ ಕೇಳಿದರು. ಷುಗರ್ ಮತ್ತು ಬಿಪಿಗೆ ಮಾತ್ರೆಗಳು ಎಷ್ಟಿವೆ ಎಂದು ಪ್ರಶ್ನಿಸಿದರು. ಈ ವೇಳೆ, ಸಿಬ್ಬಂದಿಗಳು ಷುಗರ್ ಮಾತ್ರೆಯಿದೆ. ಬಿಪಿಗೆ ಮಾತ್ರೆಗಳಿಲ್ಲ ಎಂದಾಗ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 2019ರ ಸೆಪ್ಟೆಂಬರ್’ನಲ್ಲೇ ಅನುದಾನ ಬಂದಿದ್ದರೂ, ಮಾತ್ರೆಗಳನ್ನು ತರಿಸಿಲ್ಲ ಎಂದು ಕ್ಲಾಸ್ ತೆಗೆದುಕೊಂಡರು.
ಹೊರಗಿನ ಮೆಡಿಕಲ್ ಶಾಪ್’ಗೆ ರೆಫರ್ ಮಾಡುವಂತಿಲ್ಲ
ಮತ್ತೊಂದೆಡೆ, ಮಾತ್ರೆ, ಔಷಧಿಗಾಗಿ ಹೊರಗಿನ ಮೆಡಿಕಲ್ ಶಾಪ್’ಗಳಿಗೆ ರೆಫರ್ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರಸ್ತಾಪಿಸಲಾಯಿತು. ಈ ವೇಳೆ ಸಭೆಗೆ ಬಂದಿದ್ದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಹೊರಗಿನ ಮೆಡಿಕಲ್ ಶಾಪ್’ಗೆ ರೆಫರ್ ಮಾಡಿರುವುದಾಗಿ ತಿಳಿಸಿದರು. ಇದರಿಂದ ಗರಂ ಆದ ಸಚಿವ ಈಶ್ವರಪ್ಪ, ಹೊರಗಿನಿಂದ ಔಷಧಿ ತರಿಸುವುದಕ್ಕೆ ಕಡಿವಾಣ ಹಾಕಬೇಕು. ಚೀಟಿ ಬರೆದುಕೊಡುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಏನೇನೆಲ್ಲ ಚರ್ಚೆ ಆಯಿತು?
ಎಕ್ಸ್ರೇ ತೆಗೆದರೂ ಅದರ ಶೀಟ್ ನೀಡುತ್ತಿಲ್ಲ. ಬಹುತೇಕ ಹೊರರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. 10ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಘಟಕ ಆರಂಭಿಸಿದರೂ ಕಾರ್ಯಾಚರಿಸುತ್ತಿಲ್ಲ. ಕರ್ತವ್ಯದ ಅವಧಿಯಲ್ಲಿ ವೈದ್ಯರು, ಸಿಬ್ಬಂದಿ ಲಭ್ಯವಿರುವುದಿಲ್ಲ. ಎಕ್ಸ್ರೇ ಟೆಕ್ನಿಷಿಯನ್ ಹುದ್ದೆಯನ್ನು ಭರ್ತಿ ಮಾಡಿಲ್ಲ. ಎಲ್ಲಾ 7 ರೇಡಿಯಾಲಜಿಸ್ಟ್ ಹುದ್ದೆ ಖಾಲಿಯಿದೆ. ಯಾವುದೇ ವಾರ್ಡ್ನಲ್ಲಿ ವೈದ್ಯರು ಇರುವುದಿಲ್ಲ ಎಂದು ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯ ಪ್ರಸನ್ನ, ಉಪ ಮೇಯರ್ ಚನ್ನಬಸಪ್ಪ ಅವರು ಸಚಿವರ ಗಮನಕ್ಕೆ ತಂದರು.
ಎರಡೇ ತಿಂಗಳು ಗಡುವು
ಮೆಗ್ಗಾನ್ ಆಸ್ಪತ್ರೆಯ ಎಲ್ಲಾ ಲೋಪಗಳನ್ನು ಎರಡು ತಿಂಗಳ ಒಳಗಾಗಿ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಔಷಧಿಗಾಗಿ ಚೀಟಿ ಬರೆದುಕೊಡುವ ಬಗ್ಗೆ ದೂರುಗಳು ಬರಬಾರದು. ದೂರುಗಳು ಬಂದರೆ ಅಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ. ರೇಡಿಯಾಲಜಿಸ್ಟ್ ಹುದ್ದೆ ಭರ್ತಿಯಾಗುವ ತನಕ ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಪಡೆದುಕೊಳ್ಳಬೇಕು. ಎಕ್ಸ್ರೇ ಶೀಟನ್ನು ರೋಗಿಗಳಿಗೆ ನೀಡಬೇಕು. ಕರ್ತವ್ಯದಲ್ಲಿರುವ ವೈದ್ಯರ ಮತ್ತು ಸಿಬ್ಬಂದಿಗಳ ಚಾರ್ಟ್ ಎಲ್ಲಾ ಕಡೆ ಹಾಕಬೇಕು ಎಂದು ಸೂಚಿಸಿದರು.
ಹೃದಯ ರೋಗಗಳಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾಮಗಾರಿ ಎರಡು ತಿಂಗಳ ಒಳಗಾಗಿ ಪೂರ್ತಿಯಾಗಬೇಕು. ಔಷಧಿಗಳನ್ನು ಸರಿಯಾಗಿ ಪೂರೈಸದೆ ಕರ್ತವ್ಯ ಲೋಪ ಮಾಡುತ್ತಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಮೆಗ್ಗಾನ್ ನಿರ್ದೇಶಕ ಡಾ.ಲೇಪಾಕ್ಷಿ ಬಿ.ಜಿ, ಆಡಳಿತಾಧಿಕಾರಿ ಶಿವಕುಮಾರ್, ಹಿರಿಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]