ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಮುಂಗಾರಿನ ಅವಧಿಯಲ್ಲಿ ಉಂಟಾಗಬಹುದಾದ ಎಲ್ಲಾ ಸಂಭಾವ್ಯ ಅಪಾಯಗಳನ್ನು ಎದುರಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಿನ್ನೆಲೆಯಲ್ಲಿ, ಈ ಬಾರಿ ಮೊದಲೆ ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಜಿಲ್ಲಾಡಳಿತದ ಬಳಿ ಲಭ್ಯವಿರುವ ಬೋಟು, ರಕ್ಷಣಾ ಕವಚಗಳು ಎಲ್ಲಾ ಸಾಧನ ಸಲಕರಣೆಗಳನ್ನು ಪರಿಶೀಲಿಸಬೇಕು ಎಂದರು.
ಹಾನಿ ಆಗುವ ಹಳ್ಳಿ ಗುರುತಿಸಿ
ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಗ್ರಾಮಗಳನ್ನು ಈಗಲೇ ಗುರುತಿಸಬೇಕು. ತಾಲೂಕಿನಲ್ಲಿ ಲಭ್ಯವಿರುವ ರಕ್ಷಣಾ ಸಾಮಾಗ್ರಿ, ಸಲಕರಣೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಳೆಗೆ ಸುಲಭವಾಗಿ ಕುಸಿಯಬಹುದಾದ ಮನೆ, ಕಟ್ಟಡಗಳನ್ನು ಗುರುತಿಸಿ ತೆರವು ಅಥವಾ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

6 ಬೋಟು, 25 ಕ್ಷಣಾ ಕವಚ, 50 ಟ್ರೀ ಕಟರ್
ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ 6ಬೋಟುಗಳು, 25 ರಕ್ಷಣಾ ಕವಚಗಳು, ಮುರಿದು ಬೀಳುವ ಮರಗಳನ್ನು ತೆರವುಗೊಳಿಸಲು 50 ಟ್ರೀ ಕಟ್ಟರ್ಗಳನ್ನು ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಹಲವಾರು ಸಾಹಸಿ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಎಲ್ಲರ ಸಹಕಾರವನ್ನು ಪಡೆಯಬೇಕು. ಇದಕ್ಕಾಗಿ ಅಂತಹ ಸಂಘಸಂಸ್ಥೆಗಳ ವಿವರ, ಅವರಲ್ಲಿ ಲಭ್ಯವಿರುವ ರಕ್ಷಣಾ ಸಲಕರಣೆಗಳ ವಿವರಗಳನ್ನು ಪಟ್ಟಿ ಮಾಡಬೇಕು ಎಂದರು.
ತಗ್ಗು ಪ್ರದೇಶದ ಜನರಿಗೆ ಸೂಚನೆ
ನೆರೆ ನೀರು ಸುಲಭವಾಗಿ ನುಗ್ಗಬಹುದಾದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಈಗಾಗಲೇ ಸೂಚನೆಗಳನ್ನು ನೀಡಬೇಕು. ಒಂದು ವೇಳೆ ಜನರನ್ನು ತುರ್ತಾಗಿ ಸ್ಥಳಾಂತರಿಸುವ ಸಂದರ್ಭ ಬಂದರೆ ಅವರಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಎಲ್ಲಾ ತಾಲೂಕುಗಳಲ್ಲಿ ಈಗಲೇ ಗುರುತಿಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕು. ಗಾಳಿ ಮಳೆಗೆ ಉರುಳಿ ಬೀಳುವ ವಿದ್ಯುತ್ ಕಂಬಗಳನ್ನು ತಕ್ಷಣ ದುರಸ್ತಿ ಮಾಡಲು ಸಿದ್ದತೆ ಮಾಡಬೇಕು. ಇದಕ್ಕಾಗಿ ಅಗತ್ಯ ಪ್ರಮಾಣದ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳು, ತಂತಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮಳೆಯಿಂದ ಸಾವು ನೋವುಗಳು ಸಂಭವಿಸದಂತೆ ಗರಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ರಕ್ಷಣಾ ಕಾರ್ಯದ ತರಬೇತಿ ಶಿಬಿರ
ಅತಿವೃಷ್ಟಿ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ನಿಧಿಗೆ ಕೆರೆಯಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200