ಶಿವಮೊಗ್ಗ: ಇಎಸ್‌ಐ ಯೋಜನೆಯಡಿ ಕಾರ್ಮಿಕರಿಗೆ ನಿಂತು ಹೋಗಿರುವ ಹೊರರೋಗಿ (ಒಪಿಡಿ) ಚಿಕಿತ್ಸೆ ಹಾಗೂ ಖಾಸಗಿ ಒಪ್ಪಂದದ ಆಸ್ಪತ್ರೆಗಳ ರೆಫರಲ್ ಸೌಲಭ್ಯವನ್ನು ತಕ್ಷಣವೇ ಮರುಸ್ಥಾಪಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. (ಈ ಸುದ್ದಿಯನ್ನು ಇನ್ನು 86 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆ ಇಎಸ್‌ಐ ಯೋಜನೆಯಡಿ ಖಾಸಗಿ ಒಪ್ಪಂದದ ಆಸ್ಪತ್ರೆಗಳಲ್ಲಿ ಹೊರರೋಗಿ ಚಿಕಿತ್ಸೆಗೆ ಉಲ್ಲೇಖಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಹಣ ಮರುಪಾವತಿ ಪಡೆಯುವ ಅವಕಾಶವನ್ನೂ ರದ್ದುಗೊಳಿಸಿರುವುದರಿಂದ ವಿಮಾದಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಸಂಘದ ಮುಖಂಡರು ಸಚಿವರ ಗಮನಕ್ಕೆ ತಂದರು.

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಔಷಧಗಳು ಬದಲಾದರೆ ಪ್ರತಿಯೊಂದಕ್ಕೂ ಹೈ ಕಾಸ್ಟ್ ಟ್ರೀಟ್‌ಮೆಂಟ್ ಕಮಿಟಿ ಅನುಮತಿ ಪಡೆಯಬೇಕಿದೆ. ಇದರಿಂದ ಚಿಕಿತ್ಸೆ ಪಡೆಯುವುದು ವಿಳಂಬವಾಗಿ ರೋಗಿಗಳು ಪರದಾಡುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಒಪಿಡಿ ಸೌಲಭ್ಯ ಹಾಗೂ ಉಲ್ಲೇಖಿತ ಆಸ್ಪತ್ರೆಗಳ ಚಿಕಿತ್ಸೆಯನ್ನು ಮರುಸ್ಥಾಪಿಸಿ ಕಾರ್ಮಿಕರ ಆರೋಗ್ಯ ಭದ್ರತೆಯನ್ನು ಕಾಯಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ತಕ್ಷಣ ಫೋನ್ ಕೈಗೆತ್ತಿಕೊಂಡ ಮಿನಿಸ್ಟರ್
ಇಎಸ್‌ಐ ವಿಮಾದಾರರ ಹಾಗೂ ಇತರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಮನಿವ ಆಲಿಸಿದ ಸಚಿವ ಶೋಭಾ ಕರಂದ್ಲಾಜೆ ಕೂಡಲೆ ಅಧಿಕಾರಿಗಳಿಗೆ ಕರೆ ಮಾಡಿದರು. ದೆಹಲಿಯ ಇಎಸ್‌ಐ ಕಾರ್ಪೊರೇಷನ್ ದೆಹಲಿಗೆ ಡೈರೆಕ್ಟರ್ ಜನರಲ್ ಅವರ ಜೊತೆಗೆ ಚರ್ಚಿಸಿದರು. ಅಲ್ಲದೆ ಇಎಸ್‌ಐ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲು ಅವಕಾಶವಿಲ್ಲ. ಹಾಗಿದ್ದೂ ಒಪಿಡಿ ಸೇವೆ ಸ್ಥಗಿತಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೂಡಲೆ ಈ ಸುತ್ತೋಲೆ ಹಿಂಪಡೆಯುವಂತೆ ಸೂಚಿಸಬೇಕು ಎಂದು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಶಾಸಕ ಎಸ್.ಎನ್. ಚನ್ನಬಸಪ್ಪ, ಇಎಸ್‌ಐ ವಿಮಾದಾರರ ಹಾಗೂ ಇತರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಾಸಾಬ್ ಹೆಚ್.ನಂದಿಹಳ್ಳಿ, ಮಹೇಶ್ವರಪ್ಪ, ರವೀಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಸೇರಿದಂತೆ ವಿವಿಧ ಕೈಗಾರಿಕೆಗಳ ಮುಖಸ್ಥರು, ಸಂಘಟನೆಗಳ ಪ್ರಮುಖರು ಇದ್ದರು.