ಶಿವಮೊಗ್ಗ: ನಗರದ ರಾಗಿಗುಡ್ಡ ಹಾಗೂ ಶಾಂತಿನಗರ ಬಡಾವಣೆಗಳಲ್ಲಿ ನೂತನ ಉದ್ಯಾನವನ ನಿರ್ಮಿಸುವಂತೆ ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆಯ ಪದಾಧಿಕಾರಿಗಳು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂಧನ್ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಶಾಂತಿನಗರ ಹಾಗೂ ರಾಗಿಗುಡ್ಡ ಭಾಗದ ನಿವಾಸಿಗಳಿಗೆ ವಾಯುವಿಹಾರ, ಹಿರಿಯ ನಾಗರಿಕರಿಗೆ ವಿಶ್ರಾಂತಿ ಹಾಗೂ ಮಕ್ಕಳಿಗೆ ಆಟವಾಡಲು ಉದ್ಯಾನವನ ಇಲ್ಲದೆ ತೊಂದರೆಯಾಗಿದೆ. ಹೀಗಾಗಿ ಜಾಗ ಗುರುತಿಸಿ ಸುಸಜ್ಜಿತ ಪಾರ್ಕ್ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂಧನ್, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಕಿರಣಕುಮಾರ್, ಕಾರ್ಮಿಕ ಮುಖಂಡ ಅಪ್ಸರ್ ಭಾಷಾ, ಶಾಂತಿನಗರದ ಮುಖಂಡರಾದ ಪ್ರಸನ್ನಕುಮಾರ್, ನೂರುಲ್ಲ ಖಾನ್, ಕರವೇ ಸಾದಿಕ್, ಸುಭಾನ್ ಹಾಗೂ ಸಯ್ಯದ್ ಶಫಿ ಉಪಸ್ಥಿತರಿದ್ದರು.