ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 DECEMBER 2023
SHIMOGA : ರೋಟರಿ ಕ್ಲಬ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲಾಗಿದೆ. ಡಿ.20ರಂದು ಇದರ ಉದ್ಘಾಟನೆ ನೆರವೇರಲಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ತಿಳಿಸಿದರು.
ಏನಿದು ಎದೆ ಹಾಲಿನ ಬ್ಯಾಂಕ್?
ಅವಧಿ ಪೂರ್ವ ಮಕ್ಕಳು ಜನಸಿದರೆ ತಾಯಂದಿರಲ್ಲಿ ಹಾಲು ಉತ್ಪತ್ತಿ ಆಗುವುದಿಲ್ಲ. ಆದರೆ ಮಗುವಿಗೆ ತಾಯಿಯ ಹಾಲು ಅತ್ಯಗತ್ಯ. ಹಾಗಾಗಿ ಇತರೆ ತಾಯಂದಿರಿಂದ ಹಾಲು ಸಂಗ್ರಹಿಸಿ ಪರಿಷ್ಕರಿಸಿ ಅಗತ್ಯವಿರುವ ಮಕ್ಕಳಿಗೆ ಒದಗಿಸಲಾಗುತ್ತದೆ. ಜಗತ್ತಿನಾದ್ಯಂತ ಹಲವು ಕಡೆ ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪಿಸಲಾಗಿದೆ.
ಹಾಲು ಸಂಗ್ರಹ ಹೇಗೆ? ಇಲ್ಲಿದೆ 4 ಪ್ರಮುಖಾಂಶ
ನಾವಜಾತ ಶಿಶುಗಳಿಗೆ ತಾಯಿ ಹಾಲು ಅಮೃತವಿದ್ದಂತೆ. ಈ ಮೊದಲು ತಾಯಿ ಹಾಲಿನಿಂದ ವಂಚಿತವಾದ ಮಕ್ಕಳಿಗೆ ಬೇರೆ ತಾಯಿಯ ಹಾಲನ್ನು ನೇರವಾಗಿ ಕುಡಿಸಲಾಗುತ್ತಿತ್ತು. ಆದರೆ ಹಾಲು ಕುಡಿಸುವ ತಾಯಿಯ ಆರೋಗ್ಯದ ಪೂರ್ವಪರ ಮಾಹಿತಿ ಇಲ್ಲದೆ ಹಾಲು ಕುಡಿದ ಮಕ್ಕಳು ಸೋಂಕಿಗೆ ತುತ್ತಾಗುವ ಆತಂಕವಿತ್ತು.
ಈಗ ತಾಯಿಯ ಹಾಲನ್ನು ಸಂಗ್ರಹಿಸಿ, ಪರಿಷ್ಕರಿಸಿ, ಡೀಫ್ರೀಜ್ ಮಾಡಬೇಕು ಎಂಬ ಮಾರ್ಗಸೂಚಿ ಇದೆ. ಯಾವುದೆ ಸೋಂಕು ಇಲ್ಲದ, ಆರೋಗ್ಯ ಸಮಸ್ಯೆ ಇಲ್ಲದ ತಾಯಂದಿರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಂದ ಹಾಲು ಸಂಗ್ರಹಿಸಿ 150 ಎಂ.ಎಲ್ ಅಥವಾ 250 ಎಂ.ಎಲ್ ಬಾಟಲ್ನಲ್ಲಿ ಇರಿಸಲಾಗುತ್ತದೆ. ಈ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯಾವುದೆ ಸಮಸ್ಯೆ ಇಲ್ಲದ ಹಾಲಿನ ಬಾಟಲಿ ಮೇಲೆ ಲೇಬಲ್ ಮಾಡಲಾಗುತ್ತದೆ.
ಸಂಗ್ರಹಿಸಿದ ಎದೆ ಹಾಲನ್ನು ಮೂರರಿಂದ ಆರು ತಿಂಗಳವರೆಗೆ ಡೀಫ್ರೀಜ್ (ಫ್ರಿಡ್ಜ್ನಲ್ಲಿ ಇರಿಸಲಾಗುತ್ತದೆ) ಮಾಡಿ ಸಂಗ್ರಹಿಸಿ ಇಡಲಾಗುತ್ತದೆ. ಅಗತ್ಯ ಎದುರಾದಾಗ ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತದೆ. ಆ ಬಳಿಕ ನವಜಾತ ಶಿಶುಗಳಿಗೆ ಕುಡಿಸಲಾಗುತ್ತದೆ.
ನವಜಾತ ಶಿಶುಗಳಲ್ಲಿ ಉಸಿರಾಟದ ತೊಂದರೆ, ವಿವಿಧ ಸೋಂಕುಗಳಿಗೆ ತುತ್ತಾಗುವುದು, ಕುರುಳಿನ ಸಮಸ್ಯೆಗಳು ಕಾಣಿಸುತ್ತವೆ. ಆದರೆ ತಾಯಿಯ ಹಾಲು ನವಜಾತ ಶಿಶುಗಳ ಅನ್ನನಾಳಕ್ಕೆ ಲೇಪನ ಮಾಡಲಿದೆ. ಹಾಗಾಗಿ ಸೋಂಕಿಗೆ ತುತ್ತಾಗುವುದು ಮತ್ತು ಆರೋಗ್ಯ ಸಮಸ್ಯೆ ಕಡಿಮೆಯಾಗಲಿದೆ.
ಹಾಲಿಗೆ ಎಷ್ಟು ರೇಟ್?
ತಾಯಂದಿರ ಎದೆ ಹಾಲು ಪಡೆದು ಪರೀಕ್ಷಿಸಿ, ಪರಿಷ್ಕರಿಸಿ, ಸಂಗ್ರಹಿಸಲಾಗುತ್ತದೆ. ಈ ಕಾರ್ಯಕ್ಕೆ 1 ಎಂ.ಎಲ್ ಹಾಲಿಗೆ 4.50 ರೂ.ನಿಂದ 6 ರೂ.ವರೆಗೆ ವೆಚ್ಚವಾಗಲಿದೆ. ಆದರೆ ಈ ವೆಚ್ಚ ಹೊಂದಿಸಲು ಹಲವರಿಗೆ ಕಷ್ಟ. ಆದ್ದರಿಂದ ರೋಟರಿ ಕ್ಲಬ್ ಮತ್ತು ಸರ್ಜಿ ಫೌಂಡೇಷನ್ ವತಿಯಿಂದ ಅತ್ಯಂತ ಕಡಿಮೆ ದರಕ್ಕೆ ಹಾಲು ಒದಗಿಸಲಾಗುತ್ತದೆ. ಅಲ್ಲದೆ ಇಲ್ಲಿ ಸಂಗ್ರಹವಾದ ಒಟ್ಟು ಹಾಲಿನ ಶೇ.30ರಿಂದ 50ರಷ್ಟು ಪ್ರಮಾಣದ ಹಾಲನ್ನು ಮೆಗ್ಗಾನ್ ಆಸ್ಪತ್ರೆಗೆ ಒದಗಿಸಬೇಕು ಎಂದು ಯೋಜಿಸಲಾಗಿದೆ ಎಂದು ಡಾ. ಧನಂಜಯ ಸರ್ಜಿ ತಿಳಿಸಿದ್ದಾರೆ.
700ಕ್ಕೂ ಹೆಚ್ಚು ಮಿಲ್ಕ್ ಬ್ಯಾಂಕ್
1909ರಲ್ಲಿ ಜಗತ್ತಿನಲ್ಲಿ ಮೊದಲ ಎದೆಹಾಲು ಬ್ಯಾಂಕ್ ಆರಂಭಿಸಲಾಯಿತು. ಸದ್ಯ ಪ್ರಪಂಚದಲ್ಲಿ ಇಂತಹ 756 ಮಿಲ್ಕ್ ಬ್ಯಾಂಕ್ಗಳಿವೆ. ಬ್ರೆಜಿಲ್ ದೇಶವೊಂದರಲ್ಲೆ 200ಕ್ಕೂ ಹೆಚ್ಚು ಮಿಲ್ಕ್ ಬ್ಯಾಂಕ್ಗಳಿವೆ. ಇನ್ನು, ಭಾರತದಲ್ಲಿ 90 ಮಿಲ್ಕ್ ಬ್ಯಾಂಕ್ಗಳಿವೆ. ಕರ್ನಾಟಕದ ಮೊದಲ ಮಿಲ್ಕ್ ಬ್ಯಾಂಕ್ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಈಗ ಬೆಂಗಳೂರಿನಲ್ಲಿ ಎರಡು, ಬೆಳಗಾವಿ, ಧಾರವಾಡ, ಮಂಗಳೂರಿನಲ್ಲಿ ತಲಾ ಒಂದು ಮಿಲ್ಕ್ ಬ್ಯಾಂಕ್ಗಳಿವೆ. ಮಧ್ಯ ಕರ್ನಾಟಕದಲ್ಲಿ ಮೊದಲ ಮಿಲ್ಕ್ ಬ್ಯಾಂಕ್ ಶಿವಮೊಗ್ಗದಲ್ಲಿ ಸ್ಥಾಪನೆಯಾಗಿದೆ.
ಇದನ್ನೂ ಓದಿ – ಬಗರ್ ಹುಕುಂ ಆ್ಯಪ್ ಬಿಡುಗಡೆ ಮಾಡಿದ ಮಿನಿಸ್ಟರ್, ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422