ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನಗಳ ಸರ್ವಿಸ್ ಸೆಂಟರ್ ಹಾಗೂ ತರಬೇತಿ ಸಂಸ್ಥೆ ಸ್ಥಾಪಿಸುವಂತೆ ಪ್ರಸಿದ್ಧ ಬೋಯಿಂಗ್ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. (ಈ ಸುದ್ದಿಯನ್ನು ಇನ್ನು 70 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಸಿಎಸ್ಆರ್ ಸಮಿತಿ ಸಭೆಯಲ್ಲಿ ಬೋಯಿಂಗ್ ಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಇಂತಹ ಕೇಂದ್ರಗಳನ್ನು ಸ್ಥಾಪಿಸುವುದು ಅತ್ಯಂತ ವೆಚ್ಚದಾಯಕ. ಹೀಗಾಗಿ ರಾಜ್ಯದ ಮಧ್ಯಭಾಗದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹ್ಯಾಂಗರ್ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ಸಿದ್ಧವಿದೆ. ಇಲ್ಲಿ ಸಂಸ್ಥೆಯ ಸರ್ವಿಸ್ ಸೆಂಟರ್ ಹಾಗೂ ತರಬೇತಿ ಕೇಂದ್ರ ಆರಂಭಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಪೂರಕ ಕೈಗಾರಿಕೆಗಳು
ವಿಮಾನ ನಿಲ್ದಾಣದ ಆವರಣದಲ್ಲಿ ಅಪಾರ ಪ್ರಮಾಣದ ಜಮೀನು ಲಭ್ಯವಿದೆ. ನಿಲ್ದಾಣವನ್ನು ವಿಮಾನ ಹಾರಾಟಕ್ಕೆ ಸೀಮಿತಗೊಳಿಸದೆ, ವಿಮಾನಯಾನಕ್ಕೆ ಪೂರಕವಾದ ಕೈಗಾರಿಕೆಗಳು ಹಾಗೂ ಇತರೆ ಮೂಲಗಳಿಂದ ಆದಾಯ ತರುವ ರೀತಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಜಕ್ಕೂರು ವಿಮಾನ ನಿಲ್ದಾಣದಲ್ಲಿನ ಚಾಲನಾ ತರಬೇತಿ ಕೇಂದ್ರದ ಮಾದರಿ ಇಲ್ಲೂ ತರಬೇತಿ ಚಟುವಟಿಕೆ ಆರಂಭಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ನೈಟ್ ಲ್ಯಾಂಡ್ ಕಾಮಗಾರಿ
ಸ್ಟಾರ್ ಏರ್ಲೈನ್ಸ್ ಸಂಸ್ಥೆಯು ನವೆಂಬರ್ 21 ರಿಂದ ವಿಮಾನ ಸೇವೆ ಸ್ಥಗಿತಗೊಳಿಸುತ್ತಿದೆ. ಈ ವಿಚಾರವಾಗಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ₹23 ಕೋಟಿ ಮೀಸಲಿಟ್ಟಿದೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕೇಂದ್ರದಿಂದ ಅನುಮೋದನೆ ಸಿಕ್ಕ ತಕ್ಷಣವೇ ನೈಟ್ ಲ್ಯಾಂಡಿಂಗ್ಗೆ ಇನ್ನುಳಿದ ಕಂಪನಿಗಳ ವಿಮಾನ ಸಂಚಾರ ಆರಂಭವಾಗಲಿದೆ. ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಖಾಸಗಿಗೆ ವಹಿಸುವ ಯೋಚನೆ ಇಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.