ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸರ್ಕಾರಿ ನೌಕರರೊಂದಿಗೆ ಸಂವಾದ ಹಾಗೂ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗದ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಜಿಲ್ಲಾ ಮಟ್ಟದ ವಿಡಿಯೋ ಸಂವಾದದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಓ ಹೇಮಂತ್.ಎನ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, ಸಿಸಿಎಫ್ ಹನುಮಂತಪ್ಪ, ಡಿಸಿಎಫ್‌ಗಳಾದ ಪ್ರಸನ್ನಕೃಷ್ಣ ಪಟಗಾರ್, ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಎಸಿ ಸತ್ಯನಾರಾಯಣ್, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.

##ಸಿಎಂ ನೀಡಿದ ಸೂಚನೆಗಳು, ಇಲ್ಲಿದೆ ಪಾಯಿಂಟ್ಸ್

ವರ್ಚುವಲ್ ಮೂಲಕ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಸರ್ಕಾರದ ಯಶಸ್ಸಿನಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ರಾಜ್ಯದ ಪ್ರತಿ ಅಧಿಕಾರಿ ಹಾಗೂ ನೌಕರರ ಪಾತ್ರ ಅತ್ಯಂತ ಪ್ರಮುಖ. ನಾವೆಲ್ಲರೂ ಜನಸಾಮಾನ್ಯರ ಸೇವಕರಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ಜವಾಬ್ದಾರಿ ಕೇವಲ ಆಡಳಿತಕ್ಕೆ ಸೀಮಿತವಾಗಿರದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿದೆ.

ಸಾರ್ವಜನಿಕರ ಅರ್ಜಿಗಳು ಮತ್ತು ಕುಂದುಕೊರತೆಗಳು ಅನಗತ್ಯವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟಕ್ಕೆ ತಲುಪಬಾರದು. ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ತಮ್ಮ ನಿಯೋಜಿತ ಕೇಂದ್ರ ಸ್ಥಾನದಲ್ಲೇ ವಾಸವಿದ್ದು, ಕಚೇರಿಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು ಎಂದು ಸೂಚಿಸಿದರು.

ಗ್ರಾಮೀಣ ಭಾಗದ 1 ಕೋಟಿ 11 ಲಕ್ಷ ಕುಟುಂಬಗಳಿಗೆ ಹಾಗೂ ನಗರ ಪ್ರದೇಶದ 25 ಲಕ್ಷ ಮನೆಗಳಿಗೆ ಯಾವುದೇ ಲಂಚದ ಹಂಗಿಲ್ಲದೆ, ಉಚಿತವಾಗಿ ಫೋಟೋ ಹಾಗೂ ಸಹಿ ಸಹಿತ ಖಾತಾ, ಪ್ರಮಾಣಪತ್ರಗಳನ್ನು ಮುಂದಿನ 5 ರಿಂದ 6 ತಿಂಗಳಲ್ಲಿ ತಲುಪಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರದ ಕೆಲಸ ಕಾರ್ಯಗಳಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಪ್ರತಿ ಕಾಮಗಾರಿ ಹಾಗೂ ಯೋಜನೆಗಳ ಪಾರದರ್ಶಕತೆಗೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಎಲ್ಲರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳ ಭೇಟಿಯ ಸಮಯ ಹಾಗೂ ಚಟುವಟಿಕೆಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಆಶ್ರಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಅಧಿಕಾರಿಗಳಿಗೆ ಡಿಸಿಎಂ ಸೂಚನೆ
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವರ್ಚುವಲ್ ಮೂಲಕ ಮಾತನಾಡಿ, ರಾಜ್ಯದಲ್ಲಿ 164 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ತುರ್ತು ಪರಿಸ್ಥಿತಿಯ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು 1 ಲಕ್ಷ ಮೇವಿನ ಕಿಟ್‌ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.