ಶಿವಮೊಗ್ಗ: ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರದ ಆದೇಶ ಖಂಡಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ಪೇ ಪಿಎಂ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಕಚೇರಿಯಿಂದ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಪೇ ಪಿಎಂ ಪೋಸ್ಟರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ಯಾರೆಲ್ಲ ಏನೆಲ್ಲ ಮಾತನಾಡಿದರು?
ಹೆಚ್.ಸಿ.ಯೋಗೇಶ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ: “ವಿವಿಧ ದೇಶಗಳ ಅಧ್ಯಕ್ಷರು ಭಾರತಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ಜೇಬಿನಿಂದ ಮೊಬೈಲ್ ತೆಗೆದು ಆನ್‌ಲೈನ್ ಪೇಮೆಂಟ್ ಮಾಡಿದ್ದರು. 2014ರ ನಂತರ ಡಿಜಿಟಲ್ ಪೇಮೆಂಟ್ ಹೆಚ್ಚಾಗಿದೆ ಅಂತಾ ಸರ್ಕಾರ ಬೀಗುತ್ತಿತ್ತು. ಈಗ ಆನ್‌ಲೈನ್ ಪೇಮೆಂಟ್‌ಗೆ ಶುಲ್ಕ ವಿಧಿಸುತ್ತಿದೆ. ವ್ಯಾಪಾರಿಗಳಿಗೆ ಬರೆ ಹಾಕುತ್ತಿದ್ದಾರೆ. ಗೂಗಲ್ ಪೇ, ಫೋನ್ ಪೇಗಳಿಗೆ ಶುಲ್ಕ ವಿಧಿಸಿ ಅದನ್ನು ಟ್ರಂಪ್‌ಗೆ ಕಳುಹಿಸುತ್ತಿದ್ದಾರೆ.“
ಶ್ವೇತಾ ಬಂಡಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ: “ಡಿಜಿಟಲ್ ಪೇಮೆಂಟ್ ತಂದಿದ್ದು ನಾವೇ ಎಂದು ಕೇಂದ್ರ ಸರ್ಕಾರ ಪ್ರಚಾರ ಮಾಡಿಕೊಳ್ಳುತ್ತಿದೆ. ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕತ್ತಿದ್ದಾರೆ. ವ್ಯಾಪಾರಿಗಳು ₹2000 ವಹಿವಾಟು ನಡೆಸಿದರೆ 0.04ನಷ್ಟು ಶುಲ್ಕ ವಿಧಿಸಲಾಗುತ್ತಿದೆ. ಇದರ ಹೊರೆ ಗ್ರಾಹಕರ ಮೇಲೆ ಬೀಳಲಿದೆ.“
ಪ್ರತಿಭಟನೆಯಲ್ಲಿ ಪ್ರಮುಖರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ವಿಶ್ವನಾಥ ಕಾಶಿ, ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ್, ಹರ್ಷಿತ್ ಗೌಡ ಸೇರಿ ಹಲವರು ಇದ್ದರು.