ಶಿವಮೊಗ್ಗ: ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಕೈಗೊಂಡಿರುವ ‘ಪೋಸ್ಟರ್ ವಾರ್’ ಶಿವಮೊಗ್ಗ ನಗರಕ್ಕೂ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ತಡರಾತ್ರಿ ನಗರದ ವಿವಿಧೆಡೆ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯ ಶಟ್ಟರ್ ಹಾಗೂ ಗೋಡೆಗಳಿಗೆ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಬೈಪಾಸ್ ರಸ್ತೆ ಸಮೀಪವಿರುವ ಬಿ.ವೈ. ವಿಜಯೇಂದ್ರ ಅವರ ‘ಮೈತ್ರಾದೇವಿ’ ನಿವಾಸದ ಕಾಂಪೌಂಡ್ಗೂ ಪೋಸ್ಟರ್ಗಳನ್ನು ಅಂಟಿಸಲಾಗಿದೆ.

‘ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು- ಕಳ್ನನ್ ಮಕ್ಕಳು’ ಎಂಬ ಬರಹಗಳಿರುವ ಪೋಸ್ಟರ್ಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿತ್ತು ಪೋಸ್ಟರ್ ವಾರ್
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ವಾರ್ ಆರಂಭಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಇರುವ ಯಡಿಯೂರಪ್ಪ ಅವರ ಧವಳಗಿರಿ ಮನೆಯ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿದ್ದರು. ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ “ಈ ನನ್ನ ಮಕ್ಕಳು ಕಾಂಗ್ರೆಸ್ನವರು ಇದ್ದಾರಲ್ಲಾ” ಎಂದು ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ಬೆನ್ನಿಗೆ ಹೇಳಿಕೆ ಹಿಂಪಡೆದಿದ್ದರು.