SHIVAMOGGA LIVE NEWS | SHIMOGA FM | 25 ಏಪ್ರಿಲ್ 2022
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ಮಧ್ಯೆ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಕ್ಯಾಬಿನೆಟ್’ನಲ್ಲಿ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ಶಿಫಾರಸು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಈ ಮೂಲಕ ತಣ್ಣಗಾಗಿದ್ದ ‘ಹೆಸರು ಹೋರಾಟ’ಕ್ಕೆ ಮರು ಜೀವ ನೀಡಿದರು.
ಪುನರ್ ಪರಿಶೀಲನೆಗೆ ಯಡಿಯೂರಪ್ಪ ಪತ್ರ
ಈ ನಡುವೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಹೆಸರು ಇಡುವ ಕುರಿತ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಆ ಪತ್ರ ಸಾಮಾಜಿಕ ಜಲಾತಣದಲ್ಲಿ ವೈರಲ್ ಆಗಿದೆ.
ಇವೆಲ್ಲದರ ಮಧ್ಯೆ ಹಲವು ಹೆಸರು ಮುನ್ನಲೆಗೆ ಬಂದಿವೆ. ಇವುಗಳ ಪೈಕಿ ಯಾವುದಾದರೂ ಒಂದು ಹೆಸರು ಇಡುವಂತೆ ಜಿಲ್ಲೆಯಲ್ಲಿ ಒತ್ತಾಯ ಕೇಳಿ ಬಂದಿವೆ.
ಯಾವೆಲ್ಲ ಹೆಸರುಗಳು ಮುನ್ನಲೆಯಲ್ಲಿವೆ?
ಬಿ.ಎಸ್.ಯಡಿಯೂರಪ್ಪ – ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣ ಮಾಜಿ ಸಿಎಂ ಯಡಿಯೂರಪ್ಪ. ಅವರು ಆಸಕ್ತಿ ವಹಿಸದೆ ಇದ್ದಿದ್ದರೆ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರಲಿಲ್ಲ ಅನ್ನುವ ಅಭಿಪ್ರಾಯವಿದೆ. ಆದ್ದರಿಂದ ಅವರ ಹಸರಿಡಬೇಕು ಎಂಬ ಒತ್ತಾಯವಿದೆ. ಸಚಿವರಾಗಿದ್ದ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಹೆಸರು ಸೂಚಿಸಿದ್ದರು. ಆದರೆ ಈಗ ಯಡಿಯೂರಪ್ಪ ಅವರು ಸಿಎಂಗೆ ಪತ್ರ ಬರೆದು ಪುನರ್ ಪರಿಶೀಲನೆಗೆ ಸೂಚಿಸಿದ್ದಾರೆ. ಆದರೆ ಅಭಿಮಾನಿಗಳು ಯಡಿಯೂರಪ್ಪ ಅವರ ಹೆಸರನ್ನೆ ಇಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕುವೆಂಪು – ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಹಿರಿಮೆ. ರಾಷ್ಟ್ರಕವಿ ಬಿರುದು ಪಡೆದ ಮೊದಲಿಗರು. ಶಿವಮೊಗ್ಗ ಜಿಲ್ಲೆಯವರೆ ಆಗಿರುವುದರಿಂದ ಕುವೆಂಪು ಅವರ ಹೆಸರಿಡಬೇಕು ಎಂಬ ವಾದವಿದೆ.
ಶಾಂತವೇರಿ ಗೋಪಾಲಗೌಡ – ಸಮಾಜವಾದಿ, ಹಿರಿಯ ರಾಜಕಾರಣಿ, ಇವರ ಗರಡಿಯಲ್ಲಿ ಪಳಗಿದ ಹಲವರು ವಿಧಾನ ಸೌಧ ಪ್ರವೇಶಿಸಿದ್ದಾರೆ. ದೊಡ್ಡ ಸಂಖ್ಯೆಯ ಶಿಶ್ಯವೃಂದ ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಸರಳತೆ, ಪ್ರೌಢಿಮೆಯ ಕಾರಣದಿಂದ ಈಗಲೂ ಇವರ ಹೆಸರು ಪ್ರಚಲಿತದಲ್ಲಿದೆ. ಶಿವಮೊಗ್ಗ ಜಿಲ್ಲೆಯವರೆ ಆಗಿರುವುದರಿಂದ ಶಾಂತವೇರಿ ಗೋಪಾಲಗೌಡ ಅವರ ಹೆಸರಿಡುವಂತೆ ಒತ್ತಾಯವಿದೆ.
ಎಸ್.ಬಂಗಾರಪ್ಪ – ಮಾಜಿ ಮುಖ್ಯಮಂತ್ರಿ, ವೈವಿದ್ಯ ರಾಜಕೀಯಕ್ಕೆ ಹೆಸರಾದವರು. ಸೋಲಿಲ್ಲದ ಸರದಾರ ಎಂಬ ಬಿರುದು ಹೊಂದಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ಶಿವಮೊಗ್ಗ ಜಿಲ್ಲೆಯ ಹೆಸರು ಜನಜನಿತಗೊಳಿಸಿದ ಹಿರಿಮೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈಗಲೂ ಪ್ರಬಲ್ಯ ಹೊಂದಿರುವ ಹೆಸರು. ಆದ್ದರಿಂದ ಬಂಗಾರಪ್ಪ ಅವರ ಹೆಸರಿಡಿ ಎಂಬ ಆಗ್ರಹವಿದೆ.
ಅಕ್ಕಮಹಾದೇವಿ – ಕನ್ನಡದ ಮೊದಲ ಕವಿಯತ್ರಿ, ವಚನ ಸಾಹಿತ್ಯದ ಪ್ರಮುಖ ಹೆಸರು. ಶರಣೆ ಅಕ್ಕಮಹಾದೇವಿ ಅವರು ಇದೆ ಜಿಲ್ಲೆಯವರೆ. ಶಿಕಾರಿಪುರ ತಾಲೂಕು ಉಡುತಡಿ ಅಕ್ಕನ ಹುಟ್ಟೂರು. ಅಕ್ಮಮಹಾದೇವಿ ಅವರ ಹೆಸರನ್ನೆ ಇಡುವಂತೆ ಒತ್ತಾಯವಿದೆ.
ಕೆಳದಿ ಶಿವಪ್ಪನಾಯಕ – ಕೆಳದಿ ಸಂಸ್ಥಾನದ ಪ್ರಮುಖ ನಾಯಕರಲ್ಲಿ ಒಬ್ಬರು ಶಿವಪ್ಪನಾಯಕ. ತೆರಿಗೆ ಸುಧಾರಣೆ ಕಾರಣಕ್ಕೆ ಇವರ ಹೆಸರು ಜನಜನಿತವಾಗಿದೆ. ಕೆಳದಿ ಶಿವಪ್ಪನಾಯಕ ಅವರ ಹೆಸರನ್ನು ಇಡಬೇಕು ಎಂಬ ಆಗ್ರಹವಿದೆ.
ಮಲೆನಾಡು ಅಥವಾ ಶಿವಮೊಗ್ಗ – ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡುವುದು ಬೇಡ. ಅದರ ಬದಲು ಶಿವಮೊಗ್ಗ ವಿಮಾನ ನಿಲ್ದಾಣ ಅಥವಾ ಮಲೆನಾಡು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಒತ್ತಾಯವಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣ ಎಂದೆ ಕರೆಯುತ್ತಾರೆ. ಆದ್ದರಿಂದ ಜಿಲ್ಲೆಯ ಹೆಸರನ್ನೆ ಇಡಬೇಕು ಎಂಬ ಅಭಿಪ್ರಾಯವಿದೆ.
ಸದ್ಯ ಪ್ರಚಲಿತದಲ್ಲಿರುವ ಹೆಸರುಗಳ ಮಧ್ಯೆ ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರ ಹೆಸರುಗಳು ನಿಧಾನಕ್ಕೆ ಮುನ್ನಲೆಗೆ ಬರುತ್ತಿವೆ. ಕೇಂದ್ರ ಸರ್ಕಾರ ಯಾವ ಹೆಸರಿಗೆ ಅಂತಿಮ ಮುದ್ರೆ ಒತ್ತಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಫೈನಲ್, ಮುಖ್ಯಮಂತ್ರಿಯಿಂದ ಘೋಷಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200