ಶಿವಮೊಗ್ಗದಲ್ಲಿ ರವಿ ಹಂಜ್‌, ವಿಶ್ವೇಶ್ವರ ಭಟ್‌ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ, ಕಾರಣವೇನು?

ಶಿವಮೊಗ್ಗ: ಗುರು ಬಸವಣ್ಣನವರ ಕುರಿತು ವಿವಾದಾತ್ಮಕ ‘ಬಸವ ಮಂಟಪ’ ಕೃತಿ ರಚಿಸಿ ತೇಜೋವಧೆ ಮಾಡಿರುವ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪ್ರತಿಕೃತಿ ದಹಿಸಿ ಆಕ್ರೋಶ

ಪ್ರತಿಭಟನೆಗೂ ಮುನ್ನ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿ, ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Protest-Against-Basava-Mantapa-Book-in-Shivamogga-City

12ನೇ ಶತಮಾನದ ಕಲ್ಯಾಣ ಕ್ರಾಂತಿ ಹಾಗೂ ವಚನ ಸಾಹಿತ್ಯದ ತಳಸ್ಪರ್ಶಿ ಅಧ್ಯಯನ ಮಾಡದೆ, ಸಂಶೋಧನೆ ಹೆಸರಿನಲ್ಲಿ ಮಹಾತ್ಮರನ್ನು ತೇಜೋವಧೆ ಮಾಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡು ಕೃತಿ ರಚಿಸಲಾಗಿದೆ. ಇಂತಹ ಕೃತಿಗೆ ಪ್ರೇರಣೆ ನೀಡಿ ಪ್ರಕಾಶಿಸಿರುವ ವಿಶ್ವೇಶ್ವರ ಭಟ್ ಅವರೂ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಹೆಚ್.ಸಿ. ಯೋಗೇಶ್, ಹಾಲಪ್ಪ, ಮಲ್ಲಿಕಾರ್ಜುನ, ಜಿ.ಎಸ್. ಶಿವಕುಮಾರ್, ಮಹೇಶ್ವರಪ್ಪ, ಹಾಲೇಶ್ ಗೌಡ, ಕೆ.ಆರ್. ಕೆಂಡಪ್ಪ, ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: