SHIVAMOGGA LIVE NEWS | 19 DECEMBER 2022
ಶಿವಮೊಗ್ಗ : ನಟ ಪುನೀತ್ ರಾಜಕುಮಾರ್ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸುತ್ತಿದ್ದಾರೆ. ಶಿವಮೊಗ್ಗದ ಆಟೋ ಚಾಲಕರೊಬ್ಬರು ಸ್ಮರಣೆಯ ಜೊತೆಗೆ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸದೆ ಈ ಚಾಲಕ ತನ್ನ ಆಟೋ ಸ್ಟಾರ್ಟ್ ಮಾಡುವುದಿಲ್ಲ. ಇವರ ಅಭಿಮಾನಕ್ಕೆ ಶಿವಮೊಗ್ಗದ ಅಪ್ಪು ಅಭಿಮಾನಿಗಳು ತಲೆ ಬಾಗಿದ್ದಾರೆ. (puneeth rajkumar auto)
ಸಂತೆ ಕಡೂರಿನ ಬಸವರಾಜು ಅವರು ಶಿವಮೊಗ್ಗದಲ್ಲಿ ಆಟೋ ಓಡಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಬಸವರಾಜು ಅವರು, ಮನೆ, ಮನದಲ್ಲಿ ಅವರಿಗಾಗಿ ವಿಶೇಷ ಸ್ಥಾನ ನೀಡಿದ್ದಾರೆ.
(puneeth rajkumar auto)
ಅಪ್ಪು ಫೋಟೊಗೆ ನಿತ್ಯ ಪೂಜೆ
ಬಸವರಾಜು ಅವರು ಆಟೋದಲ್ಲಿ ದೇವರ ಫೋಟೊಗಿಂತಲು ಪುನೀತ್ ರಾಜಕುಮಾರ್ ಅವರ ಫೋಟೋಗಳೆ ಹೆಚ್ಚು. ಆಟೋದ ಮುಂದಿನ ಗಾಜಿನ ಮೇಲೆ ಎರಡು, ಆಟೋ ಒಳಗೆ ಒಂದು ಫೋಟೊ ಇದೆ. ಆಟೋ ಹಿಂಬದಿಯಲ್ಲಿ ಪುನೀತ್ ರಾಜಕುಮಾರ್ ಅವರ ದೊಡ್ಡ ಫ್ಲೆಕ್ಸ್ ಹಾಕಿಸಿಕೊಂಡಿದ್ದಾರೆ. ಈ ಫ್ಲೆಕ್ಸ್ ಗೆ ಪ್ರತಿದಿನ ಪೂಜೆ ಸಲ್ಲಿಸಿ, ಒಂದು ಹೂವು ಇಟ್ಟು, ಆ ಬಳಿಕವೆ ಆಟೋ ಸ್ಟಾರ್ಟ್ ಮಾಡುತ್ತಾರೆ ಬಸವರಾಜು.
‘ಪುನೀತ್ ರಾಜಕುಮಾರ್ ಅವರು ಇಲ್ಲ ಅನ್ನುವುದನ್ನು ಈಗಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಫೋಟೋಗೆ ನಿತ್ಯ ಪೂಜೆ ಮಾಡುತ್ತೇನೆ. ಹಿಂಬದಿಯಲ್ಲಿ ಅವರ ದೊಡ್ಡ ಫೋಟೊ ಹಾಕಿಸಿಕೊಂಡಿದ್ದೇನೆ. ನಿತ್ಯ ಒಂದು ಹೂವನ್ನು ಇಟ್ಟು, ಕೈ ಮುಗಿದು ಆಟೋ ಹತ್ತುತ್ತೇನೆ’ ಅನ್ನುತ್ತಾರೆ ಬಸವರಾಜು.
(puneeth rajkumar auto)
ಅಪ್ಪು ಫೋಟೊಗೆ ಜನ ಫಿದಾ
ಆಟೋದ ಹಿಂಬದಿಯಲ್ಲಿ ಪುನೀತ್ ರಾಜಕುಮಾರ್ ಅವರ ದೊಡ್ಡ ಫೋಟೊ ಕಂಡು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆಟೋ ಚಲಿಸುತ್ತಿದ್ದಾಗ ಪಕ್ಕದಲ್ಲಿ ಹಾದು ಹೋಗುವ ವಾಹನ ಸವಾರರು ಒಳ್ಳೆಯ ಫೋಟೊ ಎಂದು ಹೇಳುವುದು, ಸೂಪರ್ ಎಂದು ಸಂಜ್ಞೆ ಮಾಡುತ್ತಾರಂತೆ.
ಇದನ್ನೂ ಓದಿ – ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಸೈಕಲ್ ಜಾಥಾ, ಎಲ್ಲಿವರೆಗೆ ಜಾಥಾ ನಡೆಯುತ್ತೆ? ಕಾರಣವೇನು?
‘ತುಂಬಾ ಸರ್ತಿ ಜನರು ಓವರ್ ಟೇಕ್ ಮಾಡಿ ಬಂದು ಫೋಟೊ ಚನ್ನಾಗಿದೆ ಅನ್ನುತ್ತಾರೆ. ಆಗೆಲ್ಲ ಖುಷಿಯಾಗುತ್ತದೆ. ಒಂದೆರಡು ಸರ್ತಿ ಪುನೀತ್ ರಾಜಕುಮಾರ್ ಅವರ ಫೋಟೊ ನೋಡಿಯೆ ಜನರು ಆಟೋ ಹತ್ತಿದ್ದಾರೆ’ ಅನ್ನುತ್ತಾರೆ ಬಸವರಾಜು.
ಇದನ್ನೂ ಓದಿ – VIRAL PHOTO | ಕೋಟೆ ಮಾರಿಕಾಂಬ ದೇವಿ ಮಡಿಲಲ್ಲಿ ಪುನೀತ್ ರಾಜಕುಮಾರ್ ಫೋಟೊ
ಮನೆ, ಮನ, ಮೊಬೈಲ್ ನಲ್ಲಿ ಅಪ್ಪು
ಆಟೋ ಚಾಲಕ ಬಸವರಾಜು ಅವರು ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಮನೆಯಲ್ಲಿಯು ಅಪ್ಪು ಫೋಟೊಗಳಿವೆ. ಈಚೆಗೆ ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಹೋಗಿದ್ದಾಗ ಅಲ್ಲಿಂದ ಫೋಟೊ ಖರೀದಿಸಿ ತಂದಿದ್ದಾರೆ. ಅದನ್ನು ಮನೆಯಲ್ಲಿ ಹಾಕಿಕೊಂಡಿದ್ದಾರೆ. ಪ್ರತಿದಿನ ಅದಕ್ಕೊಂದು ನಮಸ್ಕಾರ ಮಾಡುತ್ತಾರಂತೆ. ಇನ್ನು, ಅವರ ಮೊಬೈಲ್ ನಲ್ಲಿ ಪುನೀತ್ ಅವರ ರಾಶಿ ರಾಶಿ ಫೋಟೊಗಳಿವೆ. ಶಿವಮೊಗ್ಗ ನಗರದಾದ್ಯಂತ ಪುನೀತ್ ಸ್ಮರಣೆಯ ಕಾರ್ಯಕ್ರಮಗಳು, ಫ್ಲೆಕ್ಸ್, ಸ್ವಾಗತ ಕಮಾನು, ವೇದಿಕೆಗಳ ಮೇಲೆ ಎಲ್ಲಿಯೆ ಅಪ್ಪು ಭಾವಚಿತ್ರ ಹಾಕಿದ್ದರೆ ಅದರ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಬಸವರಾಜು ಅವರಿಗೆ ಅಭ್ಯಾಸವಾಗಿದೆ. ನಗರದಾದ್ಯಂತ ನಡೆದ ಪುನೀತ್ ಸ್ಮರಣೆಯ ಕಾರ್ಯಕ್ರಮಗಳ ಹಲವು ಫೋಟೊಗಳು ಅವರ ಬಳಿ ಇದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ, ಸಾವಿರ ಸಾವಿರ ಜನರಿಗೆ ಬಾಡೂಟ
‘ಪುನೀತ್ ರಾಜಕುಮಾರ್ ಅವರ ಎಲ್ಲಾ ಸಿನಿಮಾ ನೋಡಿದ್ದೇನೆ. ಅವರ ಸಿನಿಮಾ, ಮಾತಗಳಿಂದ ಸ್ಪೂರ್ತಿ ಪಡೆದಿದ್ದೇನೆ. ಆಟೋ ಚಾಲಕನಾಗಿ ಕಷ್ಟಪಟ್ಟು ಕೆಲಸ ಮಾಡಲು ಅವರೆ ಸ್ಪೂರ್ತಿ. ಹಾಗಾಗಿ ಈಗ ಅವರ ಫೋಟೊಗಳು ಎಲ್ಲಿಯೆ ಕಂಡರು ಮೊಬೈಲಿನಲ್ಲಿ ಕ್ಲಿಕ್ ಮಾಡಿ ಇಟ್ಟುಕೊಳ್ಳುತ್ತೇನೆ’ ಅನ್ನುತ್ತಾರೆ ಆಟೋ ಚಾಲಕ ಬಸವರಾಜು.
ಇದನ್ನೂ ಓದಿ – ಶಿವಮೊಗ್ಗದಲ್ಲಿಯು ನಡೆದಿತ್ತು ಪುನೀತ್ ರಾಜಕುಮಾರ್ ಗಂಧದ ಗುಡಿ ಸಾಕ್ಷ್ಯಚಿತ್ರದ ಶೂಟಿಂಗ್
ಬಸವರಾಜು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅಪ್ಪನಂತೆ ಮಕ್ಕಳು ಕೂಡ ಅಪ್ಪು ಅಭಿಮಾನಿಗಳು. ಆದರೆ ಈಗ ಪುನೀತ್ ಅವರಿಲ್ಲ ಅನ್ನುವ ದುಃಖ ಈ ಕುಟುಂಬಕ್ಕೆ. ಇದೆ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರ ಆದರ್ಶ, ಅವರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆಟೋದ ಮೇಲೆ ಅವರ ಭಾವಚಿತ್ರ ಹಾಕಿಕೊಂಡು ಓಡಾಡುತ್ತಿದ್ದಾರೆ ಬಸವರಾಜು. ಇವರ ಈ ಕಾರ್ಯ ಶಿವಮೊಗ್ಗದ ಅಪ್ಪು ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200