SHIVAMOGGA LIVE NEWS | 2 MAY 2024
ELECTION NEWS : ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದಾತ ದೇಶದಿಂದ ಓಡಿ ಹೋಗಲು ಅವಕಾಶ ಮಾಡಿಕೊಡುವುದೇ ಮೋದಿ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರದಂತೆ ತಡೆಯಲು ಪ್ರಧಾನಿ ಮೋದಿಗೆ ಸಾಧ್ಯವಾಗಲಿಲ್ಲ. ಭ್ರಷ್ಟಾಚಾರಿ, ಅತ್ಯಾಚಾರಿಗಳಿಗೆ ಬಿಜೆಪಿ ರಕ್ಷಣೆ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಮ ಪ್ರಭು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ರಾಹುಲ್ ಗಾಂಧಿ ಭಾಷಣದ 5 ಪ್ರಮುಖ ಪಾಯಿಂಟ್
ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಸಮಾನತೆ ಪರ ಮಾತನಾಡುವವರನ್ನು ನಕ್ಸಲ್‌ವಾದಿಗಳು ಎಂದು ಆರೋಪಿಸುತ್ತಾರೆ. ಆದರೆ ಪ್ರಧಾನಿ ಮೋದಿ ಅವರು ಸಂವಿಧಾನ ರಕ್ಷಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಬೇಕು.
ಪ್ರಜ್ವಲ್ ರೇವಣ್ಣ ಅವರದ್ದು ಲೈಂಗಿಕ ಹಗರಣವಲ್ಲ. ಅದು ಸಮೂಹಿಕ ಅತ್ಯಾಚಾರ. ಈ ಅತ್ಯಾಚಾರಿಗೆ ಮತ ನೀಡಿದರೆ ತಮಗೆ ಅನುಕೂಲ ಎಂದು ಪ್ರಧಾನಿ ಮೋದಿ ವೇದಿಕೆ ಮೇಲೆ ಭಾಷಣ ಮಾಡಿದ್ದರು. ಅದಕ್ಕೂ ಮೊದಲೆ ಪ್ರಜ್ವಲ್ ರೇವಣ ಹೀನ ಕೃತ್ಯ ಪ್ರಧಾನಿಗೆ ತಿಳಿದಿತ್ತು. ಬಿಜೆಪಿ ಮತ್ತು ಅದರ ಎಲ್ಲ ನಾಯಕರಿಗೂ ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಗೊತ್ತಿತ್ತು. ಹಾಗಿದ್ದೂ ಆತನ ಸಮರ್ಥನೆ ಮಾಡಿಕೊಂಡು, ಮೈತ್ರಿ ಮಾಡಿಕೊಂಡರು. ಅಧಿಕಾರಕ್ಕಾಗಿ ಮೋದಿ ಎಂತಹ ಮಟ್ಟಕ್ಕೂ ಇಳಿಯುತ್ತಾರೆ.
ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ಮೋದಿ ಕೇವಲ 22 ಜನರಿಗೆ ಮಾತ್ರ ಕೆಲಸ ಮಾಡಿದರು. ಅದಾನಿ, ಅಂಬಾನಿ ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ನಾವು ಕೋಟ್ಯಂತರ ಜನರನ್ನು ಲಕ್ಷಾಧೀಶ್ವರರನ್ನಾಗಿ ಮಾಡಲು ಹೊರಟಿದ್ದೇವೆ. ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೇವೆ.
ಕರ್ನಾಟಕದಲ್ಲಿ ನಾವು ಐದು ಗ್ಯಾರಂಟಿ ಘೋಷಿಸಿದ್ದೆವು. ಗೃಹಲಕ್ಷ್ಮಿ ಯೋಜನೆ ಅಡಿ ರಾಜ್ಯದಲ್ಲಿ ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತಿದ್ದೇವೆ. ಈಗ ಮಹಾಲಕ್ಷ್ಮಿ ಯೋಜನೆ ಜಾರಿಗೆ ಮುಂದಾಗಿದ್ದೇವೆ. ದೇಶದ ಪ್ರತಿ ಬಡ ಕುಟಂಬದ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಿ, ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪ್ರತಿ ತಿಂಗಳು 8,500 ರೂ.ನಂತೆ ಪ್ರತಿ ವರ್ಷ ಒಂದು ಲಕ್ಷ ರೂ. ಅವರ ಖಾತೆಗೆ ತಲುಪಲಿದೆ. ಮಹಾಲಕ್ಷ್ಮಿ ಯೋಜನೆ ಪ್ರಧಾನಿ ಮೋದಿ ಅವರ ನಿದ್ದೆಗೆಡಿಸಿದೆ. ನರೇಗಾ ಯೋಜನೆ ಅಡಿ ಸದ್ಯ ದೇಶದಲ್ಲಿ 250 ರೂ. ದೊರೆಯುತ್ತಿದೆ. ಅದನ್ನು 400 ರೂ.ಗೆ ಹೆಚ್ಚಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ರೈತರ ಸಾಲ ಮನ್ನಾ, ಎಂಎಸ್‌ಪಿ ಜಾರಿಗೊಳಿಸುತ್ತೇವೆ.
ಸಂವಿಧಾನದ ಕಾರಣಕ್ಕೆ ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಸರ್ಕಾರಿ ಸವಲತ್ತು ನೀಡಲಾಗಿದೆ. ಸಂವಿಧಾನವನ್ನು ಇವರು ಅಸ್ಥಿರಗೊಳಿಸಿದರೆ ನಿಮ್ಮ ಜಮೀನು ಸೇರಿದಂತೆ ಸರ್ಕಾರಿ ಸವಲತ್ತುಗಳು ಕೂಡ ಕೈತಪ್ಪಲಿದೆ. ದಲಿತರು, ಆದಿವಾಸಿಗಳು, ಬಡವರು ಇವರು ಅಧಿಕಾರ ಅನುಭವಿಸುತ್ತಿದ್ದಾರೆ. ಅದಕ್ಕೆ ಪ್ರಮಖ ಕಾರಣ ಸಂವಿಧಾನ. ಇದನ್ನೇ ಅಸ್ಥಿರಗೊಲಿಸಲು ಹೊರಟಿರುವ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ.
ಇದನ್ನೂ ಓದಿ – ‘ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿ ಸಾವು ಬಯಸುತ್ತಿದೆ’, ತಕ್ಷಣ ಕ್ಷಮೆಗೆ ಶಿವಮೊಗ್ಗದಲ್ಲಿ ರಾಘವೇಂದ್ರ ಆಗ್ರಹ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200