ಶಿವಮೊಗ್ಗ: ಖರೀದಿಸಿದ ಕೆಲವೇ ತಿಂಗಳಲ್ಲಿ ಲ್ಯಾಪ್ಟಾಪ್ನಲ್ಲಿ ದೋಷ ಕಂಡುಬಂದಿದ್ದು, ಅದನ್ನು ರಿಪೇರಿ ಮಾಡಿಕೊಡದೆ, ಹಣವನ್ನೂ ಹಿಂತಿರುಗಿಸದ ಹಿನ್ನೆಲೆ ಆಪಲ್ ಇಂಡಿಯಾ ಸಂಸ್ಥೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರಿಗೆ ಬಡ್ಡಿ ಸಹಿತ ಹಣ ಹಾಗೂ ಪರಿಹಾರ ನೀಡುವಂತೆ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ಹರಿಗೆ ಗ್ರಾಮದ ಸರಬಜಿತ್ ಕೌರ್ ಅವರು ₹1.80 ಲಕ್ಷ ನೀಡಿ ಆಪಲ್ ಮ್ಯಾಕ್ ಬುಕ್ ಪ್ರೋ ಲ್ಯಾಪ್ಟಾಪ್ ಖರೀದಿಸಿದ್ದರು. ಆದರೆ ಖರೀದಿಸಿದ ಕೆಲವೇ ತಿಂಗಳಲ್ಲಿ ಲ್ಯಾಪ್ಟಾಪ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ದೋಷ ಸರಿಪಡಿಸಲಿಲ್ಲ
ಸ್ಥಳೀಯ ಸರ್ವಿಸ್ ಸೆಂಟರ್ ಹಾಗೂ ಮೈಸೂರಿನ ಅಧಿಕೃತ ಕೇಂದ್ರಕ್ಕೆ ಲ್ಯಾಪ್ಟಾಪ್ ನೀಡಿದರೂ ದೋಷ ಸಂಪೂರ್ಣ ಸರಿಪಡಿಸಿಕೊಡಲಿಲ್ಲ. ಬದಲಿಗೆ ಅಸಮಂಜಸ ಉತ್ತರ ನೀಡಿದ್ದರು. ಹಾಗಾಗಿ ಸರಬಜಿತ್ ಕೌರ್ ಅವರು ಲ್ಯಾಪ್ಟಾಪ್ ಅಲ್ಲಿಯೇ ಬಿಟ್ಟಿದ್ದರು. ಕೊನೆಗೆ ಲ್ಯಾಪ್ಟಾಪ್ ಅನ್ನು ಸರಿಪಡಿಸದೆ, ಹಣವನ್ನೂ ಹಿಂತಿರುಗಿಸದೆ ಸಂಸ್ಥೆಯು ಸೇವಾ ನ್ಯೂನತೆ ಎಸಗಿತ್ತು ಎಂದು ಆರೋಪಿಸಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ದೂರಿನ ವಿಚಾರಣೆ ನಡೆಸಿದ ಗ್ರಾಹಕ ಆಯೋಗವು, ಆಪಲ್ ಇಂಡಿಯಾ ಸೇರಿದಂತೆ ನಾಲ್ಕು ಸಂಸ್ಥೆಗಳು ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದೆ. ಜಿಎಸ್ಟಿ ಹೊರತುಪಡಿಸಿ ₹1.52 ಲಕ್ಷ ಮೊತ್ತಕ್ಕೆ ಜುಲೈ 10 ರಿಂದ ಶೇ.7ರ ಬಡ್ಡಿದರದೊಂದಿಗೆ 45 ದಿನಗಳೊಳಗೆ ಮೊತ್ತ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.10ರಷ್ಟು ಬಡ್ಡಿ ವಿಧಿಸಲಾಗುವುದು. ಜೊತೆಗೆ ಮಾನಸಿಕ ಹಿಂಸೆಗೆ ₹30 ಸಾವಿರ ಹಾಗೂ ದೂರಿನ ವೆಚ್ಚವಾಗಿ ₹5 ಸಾವಿರ ನೀಡಬೇಕು ಎಂದು ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರು ನವೆಂಬರ್ 21 ರಂದು ಈ ಆದೇಶಿಸಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.