ಸೇನೆಯಲ್ಲಿ 24 ವರ್ಷ, ಸರ್ಜಿಕಲ್‌ ಸ್ಟ್ರೈಕ್‌, ಆಪರೇಷನ್‌ ಸಿಂಧೂರದ ಯೋಧ ಇಂದು ಶಿವಮೊಗ್ಗಕ್ಕೆ, ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

ಶಿವಮೊಗ್ಗ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಶಿವಮೊಗ್ಗಕ್ಕೆ ಮರಳುತ್ತಿರುವ ಹವಾಲ್ದಾರ್ ಎಸಿಪಿ ನಾಯಬ್ ಸುಬೇದಾರ್ ವಿಜಯ್ ಕುಮಾರ್ ಜೆ. ಅವರಿಗೆ ಇಂದು ನಗರದಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ.

ಬೆಂಗಳೂರು – ತಾಳಗುಪ್ಪ ರೈಲ್ಲಿನಲ್ಲಿ ಇಂದು ಸಂಜೆ 7 ಗಂಟೆಗೆ ಹವಾಲ್ದಾರ್ ವಿಜಯ್‌ ಕುಮಾರ್‌ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರ ಸ್ನೇಹಿತರ ಬಳಗದಿಂದ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು, ಸಂಘಟನೆಗಳ ಪ್ರಮುಖರು ಇಂದು ಸಂಜೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ.

Subedar-Vijay-Kumar-returns-to-Shivamogga-after-24-years-of-service

ಯಾರು ಸುಬೇದಾರ್‌ ವಿಜಯ್‌ ಕುಮಾರ್‌?

2002ರ ಸೆಪ್ಟೆಂಬರ್ 12ರಂದು ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿ ಮೂಲಕ ವಿಜಯ್‌ ಕುಮಾರ್‌ ಅವರು ಸೇನೆಗೆ ಆಯ್ಕೆಯಾಗಿದ್ದರು. ಭೋಪಾಲ್‌ನಲ್ಲಿ ತರಬೇತಿ ಪೂರ್ಣಗೊಳಿಸಿ ಪಂಜಾಬ್‌ನ ಭಟಿಂಡಾದಲ್ಲಿ ಸೇವೆ ಸಲ್ಲಿಸಿದ್ದರು. ಅಸ್ಸಾಂನ ಗುವಾಹಟಿ, ಉತ್ತರ ಪ್ರದೇಶದ ಬಬೀನಾ ಹಾಗೂ ಝಾನ್ಸಿ, ದೆಹಲಿ ಕ್ಯಾಂಟ್, ಅರುಣಾಚಲ ಪ್ರದೇಶದ ಟೆಂಗಾ ಮತ್ತು ಜಮ್ಮು–ಕಾಶ್ಮೀರದ ಮೆಂಧರ್ ಹಾಗೂ ಕತುವಾ ಸೆಕ್ಟರ್‌ ಸೇರಿದಂತೆ ದೇಶದ ವಿವಿಧ ಸೂಕ್ಷ್ಮ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸಿಕಂದರಾಬಾದ್‌ನಲ್ಲಿ ಸೇವಾ ಅವಧಿ ಪೂರ್ಣಗೊಳಿಸಿ ತವರಿಗೆ ಹಿಂತಿರುಗುತ್ತಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌, ಆಪರೇಷನ್‌ ಸಿಂಧೂರ್‌

ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಕಾರ್ಯಾಚರಣೆ ಹಾಗೂ ಆಪರೇಷನ್ ಸಿಂಧೂರ್ ಸಂದರ್ಭ ವಿಜಯ್‌ ಕುಮಾರ್‌ ಅವರು ಗಡಿ ರಕ್ಷಣಾ ಹಾಗೂ ಏರ್ ಡಿಫೆನ್ಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 2013ರ ಜಮ್ಮು ಕಾಶ್ಮೀರದ ಮೆಂಧರ್ ಕೃಷ್ಣ ಘಾಟಿ ಭೀಕರ ಘಟನೆಯ ನಂತರ ಪಾಕಿಸ್ತಾನಕ್ಕೆ ಭಾರತ ನೀಡಿದ ಪ್ರತ್ಯುತ್ತರ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು.

ಸೇನೆಯ ವಿವಿಧ ಹುದ್ದೆಗಳು

ಸಿಪಾಯಿಯಾಗಿ ಸೇನಾ ಪಯಣ ಆರಂಭಿಸಿದ ವಿಜಯ್‌ ಕುಮಾರ್‌, ಲ್ಯಾನ್ಸ್ ನಾಯಕ್, ನಾಯಕ್, ಹವಾಲ್ದಾರ್ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಸಿಪಿ ನಾಯಬ್ ಸುಬೇದಾರ್ ಆಗಿ ಸೇವೆ ಪೂರ್ಣಗೊಳಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಸೇನೆಯು ಹಲವು ಪದಕಗಳನ್ನು ನೀಡಿ ಗೌರವಿಸಿದೆ. ಅಕ್ಟೋಬರ್ 1ರ ರಾತ್ರಿ 7.30ಕ್ಕೆ ಕೆಎಸ್‌ಆರ್ ಬೆಂಗಳೂರು–ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇವರ ಸ್ವಾಗತಕ್ಕೆ ಸ್ನೇಹಿತರು ಅದ್ಧೂರಿ ಸಿದ್ಧತೆ ನಡೆಸಿದ್ಧಾರೆ. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ನಮ್ಮೂರ ಯೋಧನಿಗೆ ಶುಭ ಹಾರೈಸುವಂತೆ ಮನವಿ ಮಾಡಿದ್ದಾರೆ.