ಶಿವಮೊಗ್ಗದಲ್ಲಿ ಸಚಿವ ಕೆ.ಜೆ.ಜಾರ್ಜ್‌, ಮಳೆ, ಬಿರುಗಾಳಿ ಕುರಿತು ಮಹತ್ವದ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು?

ಶಿವಮೊಗ್ಗ: ಜಿಲ್ಲೆಯಲ್ಲಿ ಬಿರುಗಾಳಿ ಹಾಗೂ ಮುಂಗಾರು ಮಳೆಯಿಂದ ಉಂಟಾಗಿರುವ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಗೆ ವಿಶೇಷ ಪರಿಹಾರ ಪ್ಯಾಕೇಜ್ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಪಕ್ಷಾತೀತವಾಗಿ ನಿಯೋಗ ಕೊಂಡೊಯ್ಯುವಂತೆ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು. ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಕೃತಿ ವಿಕೋಪ ಪರಿಹಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Minister-KJ-Geroge-Meeting-at-Shimoga-Zilla-Panchayath

ಸಿಎಂ ಗಮನಕ್ಕೆ ತರಲು ಸಚಿವರ ಭರವಸೆ

“ಜಿಲ್ಲೆಯಲ್ಲಿ ಮಳೆ-ಗಾಳಿಯಿಂದಾಗಿ ಅಡಿಕೆ ತೋಟಗಳಿಗೆ ಭಾರಿ ಹಾನಿಯಾಗಿದೆ. ಹಾನಿಯ ಗಂಭೀರತೆಯ ಬಗ್ಗೆ ನಾನೂ ಸಹ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ. ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಯವರು ವಿಶೇಷ ಪ್ಯಾಕೇಜ್ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಿಯೋಗ ಬಂದರೆ ಪರಿಹಾರ ಪಡೆದುಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ” ಎಂದು ಸಚಿವರು ಭರವಸೆ ನೀಡಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, “ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವೊಂದರಲ್ಲೇ 11.50 ಲಕ್ಷ ಅಡಿಕೆ ಮರಗಳು ನೆಲಕ್ಕುರುಳಿವೆ. ಇದು ಅತಿದೊಡ್ಡ ಪ್ರಾಕೃತಿಕ ದುರಂತವಾಗಿದ್ದು, ಕೇವಲ ಎಸ್‌ಡಿಆರ್‌ಎಫ್ ಅಥವಾ ಎನ್‌ಡಿಆರ್‌ಎಫ್ ನಿಧಿಯ ಪರಿಹಾರದಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ಯಾಕೇಜ್ ಘೋಷಿಸಬೇಕು” ಎಂದು ಒತ್ತಾಯಿಸಿದರು.

ಮನೆ ಹಾನಿ: ತಕ್ಷಣದ ನೆರವಿಗೆ ಸೂಚನೆ

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿದ್ದ ಮಳೆಗೆ ಜಿಲ್ಲೆಯಲ್ಲಿ ನೂರಾರು ಮನೆಗಳು ಹಾನಿಗೀಡಾಗಿದ್ದರೂ ಸಂತ್ರಸ್ತರ ನೆರವಿಗೆ ಯಾರೂ ಧಾವಿಸಿಲ್ಲ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ವಿಳಂಬ ಮಾಡದೆ ತಕ್ಷಣವೇ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ

ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮತ್ತು ಉದ್ದೇಶಿತ ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಇದೇ ವೇಳೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್, ಎಸ್‌ಪಿ ಬಿ. ನಿಖಿಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!