ಶಿವಮೊಗ್ಗದ ವಿವಿಧೆಡೆ ಪೊಲೀಸ್‌ ಪಥ ಸಂಚಲನ, ಸಿಬ್ಬಂದಿಗೆ ಬ್ರೀಫಿಂಗ್‌

ಶಿವಮೊಗ್ಗ: ಹಿಂದೂ ಮಹಾಸಭಾ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಹಿನ್ನೆಲೆ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡಲು ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ರೂಟ್ ಮಾರ್ಚ್ ನಡೆಸಲಾಯಿತು.

ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ನೇತೃತ್ವದಲ್ಲಿ ಡಿಎಆರ್ ಮೈದಾನದಿಂದ ಸಶಸ್ತ್ರ ಪಡೆಗಳ ಪಥಸಂಚಲನ ನಡೆಸಲಾಯಿತು. ಡಿಎಆರ್, ಕೆಎಸ್‌ಆರ್‌ಪಿ, ಕ್ಯೂಆರ್‌ಟಿ, ಆರ್‌ಎಎಫ್ ಹಾಗೂ ಎಸ್‌ಎಎಫ್ ತುಕಡಿಗಳು ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡವು.

Police-Route-March-in-shivamogga-city-for-Hindu-Mahasabha

ಡಿಎಆರ್ ಮೈದಾನದಿಂದ ಹೊರಟು ಅಶೋಕ ವೃತ್ತ, ಓಟಿ ರಸ್ತೆ, ಕೆ.ಆರ್. ಪುರಂ, ಎಂ.ಕೆ. ಕೆ. ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ಬಿ.ಎಚ್. ರಸ್ತೆ, ಎಸ್.ಎನ್. ವೃತ್ತ ಹಾಗೂ ಎ.ಎ. ವೃತ್ತದ ಮಾರ್ಗವಾಗಿ ಸಾಗಿ, ಮತ್ತೆ ಡಿಎಆರ್ ಮೈದಾನಕ್ಕೆ ತಲುಪಿ ಪಥಸಂಚಲನವನ್ನು ಮುಕ್ತಾಯಗೊಳಿಸಿದವು.

ಬಂದೋಬಸ್ತ್‌ ಬ್ರೀಫಿಂಗ್‌

ಪಥ ಸಂಚಲನಕ್ಕು ಮುನ್ನ ಗಣಪತಿ ಮೆರವಣಿಗೆ ಬಂದೋಬಸ್ತ್‌ಗಾಗಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಡಿಎಆರ್ ಪೊಲೀಸ್ ಸಭಾಂಗಣ ಮತ್ತು ಕವಾಯತು ಮೈದಾನದಲ್ಲಿ ವಿಶೇಷ ಬ್ರೀಫಿಂಗ್ ನಡೆಸಲಾಯಿತು. ಈ ವೇಳೆ ಮೆರವಣಿಗೆಯ ಸಂದರ್ಭದಲ್ಲಿ ಸಿಬ್ಬಂದಿಯೂ ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಕುರಿತು ಜಿಲ್ಲಾ  ರಕ್ಷಣಾಧಿಕಾರಿ ಬಿ.ನಿಖಿಲ್ ಮಾಹಿತಿ ನೀಡಿದರು.