ಶಿವಮೊಗ್ಗ: ಉಪ ವಿಭಾಗಾಧಿಕಾರಿ ವರ್ಗಾವಣೆ ಗೊಂದಲಕ್ಕೆ ಸರ್ಕಾರ ಕೊನೆಗು ತೆರೆ ಎಳೆದಿದೆ. ಜಿ.ಹೆಚ್.ಸತ್ಯನಾರಾಯಣ ಅವರಿಗೆ ಸ್ಥಳ ನಿಯೋಜನೆ ಮಾಡಿ ಮರು ಆದೇಶ ಹೊರಡಿಸಿದೆ.
ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಡಾ. ಹೆಚ್.ಪಿ.ಎಸ್. ಮೈತ್ರಿ ಅವರು ಮುಂದುವರೆಯಲಿದ್ದಾರೆ. ಇದರಿಂದಗಿ ಕಳೆದ ಎರಡು ದಿನದ ಗೊಂದಲ ಬಗೆಹರಿದಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಗೊಂದಲಕ್ಕೆ ಕಾರಣವೇನು?
ಉಪ ವಿಭಾಗಾಧಿಕಾರಿ ಆಗಿದ್ದ ಜಿ.ಹೆಚ್.ಸತ್ಯನಾರಾಯಣ ಅವರನ್ನು ವರ್ಗಾವಣೆ ಮಾಡಿ ಕಳೆದ ಆಗಸ್ಟ್ 19ರಂದು ಸರ್ಕಾರ ಆದೇಶಿಸಿತ್ತು. ಉಪ ವಿಭಾಗಾಧಿಕಾರಿಯಾಗಿ ಡಾ. ಹೆಚ್.ಪಿ.ಎಸ್. ಮೈತ್ರಿ ಅವರಿಗೆ ಜವಾಬ್ದಾರಿ ವಹಿಸಿತ್ತು. ಆದರೆ ಸತ್ಯನಾರಾಯಣ ಅವರಿಗೆ ಸ್ಥಳ ನಿಯೋಜನೆ ಮಾಡದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಕೋರ್ಟ್ ಮೊರೆ
ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಪ್ರಶ್ನಿಸಿ ಸತ್ಯನಾರಾಯಣ ಅವರು ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ) ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವರ್ಗಾವಣೆ ಆದೇಶಕ್ಕೆ ತಡೆ ನೀಡಿತ್ತು. ಹೀಗಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ ಸತ್ಯನಾರಾಯಣ ಅವರು ಉಪ ವಿಭಾಗಾಧಿಕಾರಿಯಾಗಿ ಪುನಃ ಕಾರ್ಯಾರಂಭ ಮಾಡಿದ್ದರು. ಇತ್ತ ಡಾ. ಹೆಚ್.ಪಿ.ಎಸ್. ಮೈತ್ರಿ ಅವರು ಉಪ ವಿಭಾಗಾಧಿಕಾರಿಯಾಗಿ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಗೊಂದಲಕ್ಕೆ ತೆರೆ ಎಳೆದ ಸರ್ಕಾರ
ಮಂಗಳವಾರವು ಗೊಂದಲ ಮುಂದುವರೆದಿತ್ತು. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಹಾಜರಿದ್ದರು. ಇದು ಸಿಬ್ಬಂದಿಗೆ ಗೊಂದಲ ಮೂಡಿಸಿತ್ತು. ಕೊನೆಗೆ ಸರ್ಕಾರ ಜಿ.ಹೆಚ್.ಸತ್ಯನಾರಾಯಣ ಅವರ ವರ್ಗಾವಣೆ ಸಂಬಂಧ ಹೊಸ ಅಧಿಸೂಚನೆ ಹೊರಡಿಸಿತು. ಡಾ. ಹೆಚ್.ಪಿ.ಎಸ್.ಮೈತ್ರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಸತ್ಯನಾರಾಯಣ ಅವರನ್ನು ವರ್ಗಾಯಿಸಿತು.
ಆಗಸ್ಟ್ 27ರಂದು ಜಿ.ಹೆಚ್.ಸತ್ಯನಾರಾಯಣ ಅವರು ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಸತ್ಯನಾರಾಯಣ ಅವರು ಶಿವಮೊಗ್ಗದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದರು. ತಹಶೀಲ್ದಾರ್, ಚುನಾವಣೆ ವಿಭಾಗದ ತಹಶೀಲ್ದಾರ್, ಉಪ ವಿಭಾಗಾಧಿಕಾರಿಯಾಗಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಲ್ಲಿ ಖಜಾಂಚಿಯಾಗಿದ್ದರು.