ಶಿವಮೊಗ್ಗದ ಮೂವರು ಉದ್ಯಮಿಗಳಿಗೆ ಪ್ರಶಸ್ತಿ, ಎರಡು ದಿನ ಕೈಗಾರಿಕಾ ವಸ್ತುಗಳ ಪ್ರದರ್ಶನ, ಎಲ್ಲಿ? ಯಾವಾಗ?

ಶಿವಮೊಗ್ಗ: ಸ್ಥಳೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಸ ಉದ್ಯಮಾವಕಾಶ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ಭದ್ರಾವತಿ ಕೈಗಾರಿಕಾ ಸಂಘದ (ಎಸ್‌ಬಿಐಎ) ವತಿಯಿಂದ ಅ.28 ಮತ್ತು 29ರಂದು ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಬೃಹತ್ ವೆಂಡರ್ ಡೆವಲಪ್‌ಮೆಂಟ್ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲ್. ಚಂದ್ರಶೇಖರ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 118 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಇಲಾಖೆ ಹಾಗೂ ವಿವಿಧ ಕೈಗಾರಿಕಾ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕೈಗಾರಿಕೆಗಳು ತಮ್ಮ ಉತ್ಪನ್ನಗಳು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪ್ರಮುಖ ಖರೀದಿದಾರ ಸಂಸ್ಥೆಗಳಿಗೆ ಪರಿಚಯಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ ಎಂದರು.

MSME-Industrialists-Press-meet-in-Shivamogga

ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಸುಮಾರು 80 ರಿಂದ 90 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 5,000 ರಿಂದ 6,000 ಜನರಿಗೆ ಉದ್ಯೋಗ ಕಲ್ಪಿಸಿವೆ. ಈ ಘಟಕಗಳಿಗೆ ಹೊಸ ಗ್ರಾಹಕರನ್ನು ಪರಿಚಯಿಸುವುದು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಬೃಹತ್ ಕೈಗಾರಿಕೆಗಳಿಗೆ ಪೂರೈಕೆದಾರರಾಗಿ ಬೆಳೆಯಲು ನೆರವಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ದಕ್ಷಿಣ ಪಶ್ಚಿಮ ರೈಲ್ವೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ರೈಲ್ ವೀಲ್ ಫ್ಯಾಕ್ಟರಿ, ಆರ್ಡಿನನ್ಸ್ ಫ್ಯಾಕ್ಟರಿ, ಕೊಚ್ಚಿನ್ ಶಿಪ್‌ಯಾರ್ಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ (ಎನ್‌ಎಸ್‌ಐಸಿ) ಸೇರಿದಂತೆ ಪ್ರಮುಖ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಕೈಗಾರಿಕೋದ್ಯಮಿಗಳಿಗೆ ಖರೀದಿ ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಲು ಹಾಗೂ ಹೊಸ ವ್ಯಾಪಾರ ಸಂಪರ್ಕ ಬೆಳೆಸಲು ಅವಕಾಶ ದೊರೆಯಲಿದೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಮೂವರಿಗೆ ‘ಕೈಗಾರಿಕಾ ರತ್ನ’ ಪ್ರಶಸ್ತಿ

ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ಜಿಲ್ಲೆಯ ಮೂವರು ಹಿರಿಯ ಉದ್ಯಮಿಗಳಿಗೆ ‘ಕೈಗಾರಿಕಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಂತಲಾ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ರುದ್ರೇಗೌಡ ಎಸ್., ಮಲ್ನಾಡ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಮಧುಕರ್ ಜೋಯಿಸ್ ವೈ.ವಿ. ಹಾಗೂ ಪಿಯರ್‌ಲೈಟ್‌ ಲೈನರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಹೆಚ್.ಜಿ. ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಐಟಿಐ ಸಂಸ್ಥೆಗಳಿಗೂ ಆಹ್ವಾನ ನೀಡಲಾಗಿದೆ. ಕೈಗಾರಿಕೋದ್ಯಮಿಗಳು, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಪೂರೈಕೆದಾರರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಉತ್ಪಾದನೆಗೆ ಉತ್ತೇಜನ

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ಶಿವಮೊಗ್ಗದ ಕೈಗಾರಿಕೆಗಳ ಅಭಿವೃದ್ಧಿಗೆ ಎಕ್ಸ್‌ಪೋ ಪೂರಕವಾಗಲಿದೆ. ಸ್ಥಳೀಯ ಕೈಗಾರಿಕೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಇಲ್ಲಿಯೇ ತಯಾರಿಸಲು ಈ ಕಾರ್ಯಕ್ರಮ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಜಿಲ್ಲೆಯ ಆರ್ಥಿಕ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ. ಜಿಲ್ಲೆಯ ಎಲ್ಲ ಕೈಗಾರಿಕೋದ್ಯಮಿಗಳು ಎಕ್ಸ್‌ಪೋದಲ್ಲಿ ಭಾಗವಹಿಸಿ, ಲಭ್ಯವಿರುವ ಸೌಲಭ್ಯಗಳು ಹಾಗೂ ವ್ಯಾಪಾರ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಶಿವಮೊಗ್ಗದ ಕೈಗಾರಿಕೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ. ಗೋಪಿನಾಥ್, ಎಸ್‌ಬಿಐಎ ಕಾರ್ಯದರ್ಶಿ ಎಸ್. ಎಸ್. ಟಿ. ರಾಜೇಶ್, ಎ.ಎಲ್. ಚಂದ್ರಶೇಖರ್, ಹೆಚ್. ಎಲ್. ದಿನೇಶ್, ಆಯನೂರು ಸಂತೋಷ್ ಇದ್ದರು.