ಆರೋಗ್ಯ ತಪಾಸಣೆ ಹೆಸರಿನಲ್ಲಿ ₹799.20 ಕೋಟಿ ಅಕ್ರಮ, ಶಾಸಕ ಆರಗ ಜ್ಞಾನೇಂದ್ರ ಆರೋಪವೇನು?

ಶಿವಮೊಗ್ಗ: ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಿನಲ್ಲಿ ₹799.20 ಕೋಟಿ ಅಕ್ರಮ ನಡೆದಿದೆ. ಈ ಬಗ್ಗೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಮಾಹಿತಿ ನೀಡಿದರು. ಶಾಸಕ ಆರಗ ಜ್ಞಾನೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌.

Home-Minister-Araga-Jnanendra-Press-meet-in-Shimoga.

point-1

ಕಳೆದ ಮೂರು ವರ್ಷಗಳಲ್ಲಿ ಅಂದಾಜು 28 ಲಕ್ಷ ಜನರ ತಪಾಸಣೆ ನಡೆಸಿ, ಒಬ್ಬರಿಗೆ ₹2,950ರಂತೆ ₹799.20 ಕೋಟಿ ವೆಚ್ಚ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, ರಾಜ್ಯದಾದ್ಯಂತ ವಾಸ್ತವವಾಗಿ ತಪಾಸಣೆ ನಡೆದಿರುವ ಬಗ್ಗೆ ಸಮರ್ಪಕ ದಾಖಲೆಗಳೇ ಲಭ್ಯವಿಲ್ಲ. ತಪಾಸಣೆಗಾಗಿ ಎಂಟು ಗುತ್ತಿಗೆದಾರರಿಗೆ 81 ಕಾರ್ಯಾದೇಶಗಳನ್ನು ನೀಡಲಾಗಿದೆ. ಯಾವ ಕಾರ್ಮಿಕರನ್ನು ಎಲ್ಲಿ ತಪಾಸಣೆ ಮಾಡಲಾಯಿತು, ವೈದ್ಯರು ಮತ್ತು ಪ್ರಯೋಗಾಲಯಗಳ ವಿವರ ಹಾಗೂ ಬಳಸಿದ ಕಿಟ್‌ಗಳ ಖರೀದಿ-ಪಾವತಿ ವಿವರಗಳು ಲಭ್ಯವಿಲ್ಲ.

point-2

ಒಬ್ಬ ಕಾರ್ಮಿಕ ಹಾಗೂ ಅವಲಂಬಿತರಿಗೆ 20 ಬಗೆಯ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಎಚ್‌ಐವಿ ಪರೀಕ್ಷಾ ಕಿಟ್‌ ಖರೀದಿಯನ್ನೂ ತೋರಿಸಲಾಗಿದ್ದು, ಸಣ್ಣ ಮಕ್ಕಳಿಗೂ ಎಚ್‌ಐವಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಲ್ ಮಾಡಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ.

point-3

ಈ ಯೋಜನೆಯ ಹಣದ ವಹಿವಾಟು ದೆಹಲಿ, ಕೇರಳ ಸೇರಿದಂತೆ ಹೊರರಾಜ್ಯಗಳಿಗೂ ವಿಸ್ತರಿಸಿದೆ. ವೈದ್ಯರು ಸೇರಿದಂತೆ ಕೆಲವರಿಗೆ ನಗದು ರೂಪದಲ್ಲಿ ಹಣ ಪಾವತಿಸಲಾಗಿದೆ ಎಂಬ ಆರೋಪವಿದೆ. ಕಾರ್ಮಿಕ ಇಲಾಖೆ ಹಾಗೂ ಮಂಡಳಿಯ ಅಧಿಕಾರಿಗಳ ಪಾತ್ರದ ತನಿಖೆಯಾಗಬೇಕು. ಪ್ರಕರಣದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಪಾತ್ರದ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಜೊತೆಗೆ ಹಣದ ವಹಿವಾಟು ಹೊರರಾಜ್ಯಗಳಿಗೂ ವಿಸ್ತರಿಸಿರುವುದರಿಂದ ರಾಜ್ಯದ ತನಿಖಾ ಸಂಸ್ಥೆಗಳ ಬದಲು ಸಿಬಿಐ ಅಥವಾ ಇ.ಡಿಗೆ ಪ್ರಕರಣ ವಹಿಸುವುದು ಸೂಕ್ತ.

point-4

ಶಿವಮೊಗ್ಗ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸಿ ₹30 ಕೋಟಿ ಖರ್ಚು ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಕುಂಸಿಯಲ್ಲಿ 1,402, ಟಿಪ್ಪುನಗರದಲ್ಲಿ 1,502 ಹಾಗೂ ಹಾರನಹಳ್ಳಿಯಲ್ಲಿ 1,602 ಜನರಿಗೆ ತಪಾಸಣೆ ನಡೆದಿದೆ ಎನ್ನಲಾಗಿದೆ. ಆದರೆ ಸ್ಥಳೀಯ ಫಲಾನುಭವಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತೀರ್ಥಹಳ್ಳಿ ಕ್ಷೇತ್ರದಲ್ಲಂತೂ ಇಂತಹ ಯಾವುದೇ ಕಾರ್ಯಕ್ರಮ ನಡೆದಿಲ್ಲ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಆರ್. ಕೆ. ಸಿದ್ರಾಮಣ್ಣ ಹಾಗೂ ಮುಖಂಡ ಹೆದ್ದೂರು ನವೀನ್ ಉಪಸ್ಥಿತರಿದ್ದರು.