SHIVAMOGGA LIVE NEWS | 3 ಮಾರ್ಚ್ 2022
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಸಿದ್ಧವಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನರಿಗೆ ಈ ಭಾರಿಯ ರಾಜ್ಯ ಬಜೆಟ್ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಿವಮೊಗ್ಗ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿತ್ತು. ಅಭಿವೃದ್ಧಿ ಕಾರ್ಯಗಳು ಕೂಡ ನಿರಂತರವಾಗಿ ನಡೆದಿವೆ. ಆದರೂ ಜಿಲ್ಲೆಯ ಅಭಿವೃದ್ದಿ ಸಂಬಂಧ ಹಲವು ಬೇಡಿಕೆಗಳು ಹಾಗೆ ಉಳಿದುಕೊಂಡಿವೆ. ಈ ಬಜೆಟ್’ನಲ್ಲಿ ಇವುಗಳು ಈಡೇರುವ ನಿರೀಕ್ಷೆಯೊಂದಿಗೆ ಜಿಲ್ಲೆಯ ಜನರಿದ್ದಾರೆ.
ಏನೆಲ್ಲ ನಿರೀಕ್ಷೆಗಳಿವೆ?
» ಪಶುಪಾಲನೆ, ಮೀನುಗಾರಿಕೆಗೆ ಸಂಬಂಧಿಸಿದಂತೆ ಬೀದರ್‌ನಲ್ಲಿ ಏಕೈಕ ವಿಶ್ವವಿದಾಲಯವಿದೆ. ಶಿವಮೊಗ್ಗ ಕೇಂದ್ರ ಮಾಡಿಕೊಂಡು ದಕ್ಷಿಣ ಕರ್ನಾಟಕಕ್ಕೆ ಮತ್ತೊಂದು ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಬೇಕೆಂಬ ದಶಕಗಳ ಬೇಡಿಕೆ ಈ ಬಾರಿಯಾದರೂ ಈಡೇರುತ್ತದೆ ಎಂಬ ಆಶಯ ಜನತೆಯಲ್ಲಿದೆ.
» ವಾಹನಗಳ ಬಿಡಿಭಾಗಗಳನ್ನು ವಿದೇಶಗಳಿಗೆ ರಫ್ತು ಮಾಡುವಂತಹ ನೂರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಶಿವಮೊಗ್ಗದಲ್ಲಿದ್ದು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಮತ್ತು ಕೈಗಾರಿಕೆಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಕೌಶಲ್ಯವನ್ನು ವೃದ್ಧಿಸುವ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆ 10 ವರ್ಷದಿಂದ ಹಾಗೆಯೆ ಉಳಿದಿದೆ.
» ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆದಾಯ ವೃದ್ಧಿಗೆ ಬಹಳಷ್ಟು ಅವಕಾಶವಿದೆ. ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ.
» ಜಿಲ್ಲೆಯಲ್ಲಿ ಈಗಾಗಲೆ ಮಂಜೂರು ಪಡೆದುಕೊಂಡ ಹೊಸಹಳ್ಳಿ ಸೇರಿದಂತೆ ಹಲವು ಏತ ನೀರಾವರಿ ಯೋಜನೆಗಳು ಅನುದಾನಕ್ಕೆ ಎದುರು ನೋಡುತ್ತಿವೆ. ಹೊಳಲೂರು, ಕೊರ್ಲಹಳ್ಳಿ ಏತ ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು 10 ವರ್ಷಗಳಾಗಿವೆ.
» ಜಿಲ್ಲಾ ಕೇಂದ್ರದಲ್ಲಿ ವಿವಿಧ ಇಲಾಖೆಗಳನ್ನು ಒಂದೇ ಸೂರಿನಡಿ ತರಬೇಕೆಂಬ ಯೋಜನೆ ಜಿಲ್ಲಾಡಳಿತ ಭವನ ಮಂಜೂರಾದರೂ ಅನುದಾನಕ್ಕೆ ಎದುರು ನೋಡುತ್ತಿದೆ. ಸಕ್ರೆಬೈಲಲ್ಲಿ ಜೈವಿಕ ಉದ್ಯಾನವನ, ಶಿವಮೊಗ್ಗದಲ್ಲಿ ಎನ್‌ಜಿಒ ವಸತಿ ಗೃಹಗಳ ಸಂಕೀರ್ಣ ನಿರ್ಮಾಣದ ನಿರೀಕ್ಷೆಯಲ್ಲೂ ಜಿಲ್ಲೆಯ ಜನರಿದ್ದಾರೆ.
ಅನುದಾನ ಬೇಕು
» ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಹಂತದಲ್ಲಿ ತಮ್ಮ ಕಡೇ ಸಂಪುಟದಲ್ಲಿ ಯಡಿಯೂರಪ್ಪ ಅವರು ಬಹುನಿರೀಕ್ಷೆಯ ಆಯುಷ್ ವಿಶ್ವವಿದ್ಯಾಲಯಕ್ಕೆ ಮಂಜೂರಾತಿ ನೀಡಿದ್ದರು. ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗ ತಾಲೂಕು ನರಸಿಂಹರಾಜಪುರ ರಸ್ತೆ ಬಳಿ ವಿನಾಯಕನಗರದಲ್ಲಿ 100 ಎಕರೆ ಭೂಮಿಯನ್ನೂ ಮೀಸಲಿಡಲಾಗಿದೆ. ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ ಘೋಷಣೆಯೊಂದೇ ಬಾಕಿ ಇದೆ.
» ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳನ್ನು ಒಟ್ಟಿಗೆ ಒಳಗೊಂಡ ಏಕೈಕ ವಿಶ್ವವಿದ್ಯಾಲಯ ಸಾಗರ ತಾಲೂಕು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ವಿಶ್ವವಿದ್ಯಾಲಯ. ಇದರ ಎರಡನೇ ಹಂತದ ಯೋಜನೆ ಕಾಮಗಾರಿಗಳ ಅನುಷ್ಠಾನಕ್ಕೆ ಈ ಹಿಂದೆಯೆ 150 ಕೋಟಿ ರೂ. ಮಂಜೂರು ಮಾಡಲಾಗಿದೆ. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದಾಗಿ ಅನುದಾನ ಘೋಷಣೆಯಾಗಿಲ್ಲ.
ಹೊಸ ತಾಲೂಕುಗಳ ರಚನೆ
» ಜಿಲ್ಲೆಯಲ್ಲಿ ಜನಸಂಖ್ಯೆ ಮತ್ತು ವಿಸ್ತಾರಕ್ಕೆ ಅನುಗುಣವಾಗಿ ಹೊಸ ತಾಲೂಕುಗಳನ್ನು ರಚಿಸಬೇಕೆಂಬ ಬೇಡಿಕೆ 50 ವರ್ಷವಾದರೂ ಈಡೇರಿಲ್ಲ. ಭದ್ರಾವತಿ ಬೇರ್ಪಡಿಸಿ ಹೊಳೆಹೊನ್ನೂರು, ಶಿಕಾರಿಪುರ ಬೇರ್ಪಡಿಸಿ ಶಿರಾಳಕೊಪ್ಪ ಮತ್ತು ಸೊರಬ ಬೇರ್ಪಡಿಸಿ ಆನವಟ್ಟಿ ತಾಲೂಕು ರಚನೆ ಮಾಡಬೇಕೆಂಬ ಒತ್ತಾಸೆ ಇದೂವರೆಗೆ ಈಡೇರಿಲ್ಲ.
ಪೊಲೀಸ್ ಕಮಿಷನರೇಟ್
» ರಾಜ್ಯದಲ್ಲಿ ಕೋಮು ವಿಷಯದಲ್ಲಿ ಕರಾವಳಿ ಪ್ರದೇಶಕ್ಕಿಂತಲೂ ಸೂಕ್ಷ್ಮ ಜಿಲ್ಲೆ ಎನಿಸಿಕೊಂಡ ಶಿವಮೊಗ್ಗದಲ್ಲಿ ಆಗಾಗ್ಗೆ ಗಲಭೆಗಳು ಸಂಭವಿಸುತ್ತಲೇ ಇವೆ. ವೈಯಕ್ತಿಕ ಸಂಗತಿಗಳೂ ನಗರದೆಲ್ಲೆಡೆ ಹರಡುವಂತೆ ಮಾಡುತ್ತಿದೆ. ಇದರ ಜತೆಗೆ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ, ಭದ್ರಾವತಿ ನಗರವನ್ನೂ ಸೇರಿಸಿಕೊಂಡು ಶಿವಮೊಗ್ಗ-ಭದ್ರಾವತಿ ಪೊಲೀಸ್ ನಗರ ಆಯುಕ್ತಾಲಯ ಸ್ಥಾಪಿಸಬೇಕೆಂಬ ಆಗ್ರಹ ಇದೆ. ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿರುವುದರಿಂದ ಈ ಬೇಡಿಕೆ ಈಡೇರುವ ನಿರೀಕ್ಷೆ ಜನರಲ್ಲಿದೆ.
ಎಂಪಿಎಂ ಪುನಶ್ಚೇತನ
» ಎಂಪಿಎಂ ಕಾರ್ಖಾನೆಗೆ ಅಗತ್ಯವಾಗಿದ್ದ ಅರಣ್ಯಭೂಮಿಯನ್ನು ಸರ್ಕಾರ ಒದಗಿಸಿದ್ದರೂ ಕಾರ್ಖಾನೆ ನಡೆಸಲು ಈವರೆಗೆ ಯಾವುದೇ ಕಂಪನಿಗಳು ಮುಂದೆ ಬಂದಿಲ್ಲ. ಸರಕಾರ ಖಾಸಗಿ ಸಂಸ್ಥೆಗೆ ವಹಿಸುವ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಿದರೆ ಸಾವಿರಾರು ಕುಟುಂಬಗಳಿಗೆ ಆಧಾರವಾಗಲಿದೆ.
ಶಿಮುಲ್ ಬೇಡಿಕೆ ಈಡೇರಲಿ
» ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಬೇಕಿದೆ. ಹಾಲಿನ ಪೌಡರ್ ಘಟಕಕ್ಕೆ 150 ಕೋಟಿ, ದಾವಣಗೆರೆಯಲ್ಲಿ 3 ಲಕ್ಷ ಲೀಟರ್ ಹಾಲು ಸಂಗ್ರಹ ಘಟಕದ ನಿರ್ಮಾಣಕ್ಕೆ 300 ಕೋಟಿ ಬೇಕಿದೆ. ಇವರೆಡು ಸಾಕಾರಗೊಂಡರೆ ಹೈನುಗಾರರಾಗಿ ಇನ್ನಷ್ಟು ದೃಢ ವಿಶ್ವಾಸ ಮೂಡಿಸಲಿದೆ.
ರೈಲ್ವೆಗೆ ರಾಜ್ಯದ ಪಾಲು
» ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಬಜೆಟ್‌ನಲ್ಲಿ ಒದಗಿಸಬೇಕು. ಶಿವಮೊಗ್ಗ- ಬೀರೂರು ಮಾರ್ಗದ ಡಬ್ಲಿಂಗ್, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ, ಕೋಟೆಗಂಗೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಕೋಚಿಂಗ್ ಡಿಪೋಗೆ ರಾಜ್ಯದ ತನ್ನ ಪಾಲಿನ ಅನುದಾನ ನೀಡಬೇಕು. ಕೇಂದ್ರ ಸರ್ಕಾರ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಈ ವರ್ಷ ಅನುದಾನ ನೀಡಿದೆ. ರಾಜ್ಯ ಬಜೆಟ್‌ನಲ್ಲಿ ಎಷ್ಟು ಅನುದಾನ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಟಾಸ್ಕ್ ಫೋರ್ಸ್’ಗೆ ಬೇಕಿದೆ ಬಲ
» ಅಡಕೆ ಬೆಳೆಗಾರರ ಹಿತ ಕಾಯಲು ಸ್ಥಾಪನೆಯಾದ ಅಡಕೆ ಟಾಸ್ಕ್ ಫೋರ್ಸ್’ಗೆ ಆರ್ಥಿಕ ಬಲ ತುಂಬುವ ಕೆಲಸ ಆಗಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆಯಿದೆ. ಅಡಕೆಯ ಅನ್ಯ ಬಳಕೆ ಬಗ್ಗೆ ಸಂಶೋಧನೆ, ಅಡಕೆ ಅರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದು, ಕೊಳೆ ರೋಗ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು, ಹಳದಿ ಎಲೆ ರೋಗಕ್ಕೆ ತುತ್ತಾದ ತೋಟಗಳ ಮಾಲೀಕರಿಗೆ ಪರಿಹಾರ. ಗೋರಕ್ ಸಿಂಗ್ ವರದಿ ಜಾರಿ ಸೇರಿ ಅನೇಕ ಸವಾಲುಗಳನ್ನು ಎದುರಿಸಲು ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕಿದೆ.
ಜಿಲ್ಲೆಯ ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಜನರಲ್ಲಿದೆ.