ಶಿವಮೊಗ್ಗ: ಕ್ಯಾನ್ಸರ್ ಜಾಗೃತಿ ಕ್ಷೇತ್ರದಲ್ಲಿ ಮಲೆನಾಡಿನ ವೈದ್ಯರೊಬ್ಬರ ಸಾಧನೆ ಈಗ ಭಾಷೆಯ ಗಡಿ ದಾಟಿ ಜಾಗತಿಕ ಮಟ್ಟ ತಲುಪಿದೆ. ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞೆ (Senior Oncologist) ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಜಾಗೃತಿ ಪುಸ್ತಕದ ಫ್ರೆಂಚ್ ಆವೃತ್ತಿ ‘ಲಾ ರೆಪಾನ್ಸ್ ಒ ಕ್ಯಾನ್ಸರ್’ (La Réponse au Cancer) ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಕನ್ನಡ, ಇಂಗ್ಲೀಷ್ ಈಗ ಫ್ರೆಂಚ್
ಡಾ. ಅಪರ್ಣಾ ಶ್ರೀವತ್ಸ ಅವರು 2024ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ‘ಕ್ಯಾನ್ಸರ್‌ಗೆ ಆನ್ಸರ್’ ಎಂಬ ಪುಸ್ತಕವನ್ನು ಬರೆದಿದ್ದರು. ರೋಗಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಧೈರ್ಯ ತುಂಬಿದ ಈ ಕೃತಿ, ನಂತರ ಇಂಗ್ಲಿಷ್‌ನಲ್ಲಿ ‘ಆನ್ಸರಿಂಗ್ ಕ್ಯಾನ್ಸರ್’ (Answering Cancer) ಎಂಬ ಹೆಸರಿನಲ್ಲಿ ಹೊರಬಂದಿತ್ತು. ಇದೀಗ ಪ್ರತಿಷ್ಠಿತ ಭಾರತ-ಫ್ರೆಂಚ್ ಸಾಂಸ್ಕೃತಿಕ ಸಂಸ್ಥೆಯಾದ ‘ಅಲಯನ್ಸ್ ಫ್ರಾಂಸೈಸ್ ಡಿ ಬೆಂಗಳೂರು’ (Alliance Française de Bengaluru) ಆವರಣದಲ್ಲಿ ಇದರ ಫ್ರೆಂಚ್ ಆವೃತ್ತಿ ಲೋಕಾರ್ಪಣೆ ಮಾಡಲಾಯಿತು.

- ಈ ಪುಸ್ತಕದ ಫ್ರೆಂಚ್ ಅನುವಾದವನ್ನು ಏಕ್ಸ್ ಮಾರ್ಸೈ ವಿಶ್ವವಿದ್ಯಾಲಯದ ಆಹ್ವಾನಿತ ಅಧ್ಯಾಪಕ ವೆಂಕಟೇಶ್ ಕೃಷ್ಣಮೂರ್ತಿ ಅವರು ಸಿದ್ಧಪಡಿಸಿದ್ದಾರೆ.
- ಅಲಯನ್ಸ್ ಫ್ರಾಂಸೈಸ್ ಡಿ ಬೆಂಗಳೂರಿನ ನಿರ್ದೇಶಕ ಜಾನ್-ಮಾರ್ಕ್ ಡೆಪಿಯೆರ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.
- ಕ್ಯಾನ್ಸರ್ ರೋಗ ನಿರ್ಣಯ (Diagnosis), ಚಿಕಿತ್ಸೆ (Treatment) ಮತ್ತು ತಡೆಗಟ್ಟುವಿಕೆಯ (Prevention) ವಿಷಯಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಈ ಕೃತಿ ವಿವರಿಸುತ್ತದೆ ಎಂದು ತಿಳಿಸಲಾಗಿದೆ.
ಕನ್ನಡದಲ್ಲಿ ಈ ಪುಸ್ತಕ ಬರೆದಾಗ ನನ್ನ ಉದ್ದೇಶ ಬಹಳ ಸರಳವಾಗಿತ್ತು. ಕ್ಯಾನ್ಸರ್ ಎದುರಿಸುತ್ತಿರುವ ರೋಗಿಯ ಕೈ ಹಿಡಿದು ಅವರಿಗೆ ಧೈರ್ಯ ತುಂಬುವುದು. ಈ ಪುಸ್ತಕ ಈಗ ಫ್ರೆಂಚ್ ಭಾಷೆಗೆ ಅನುವಾದಗೊಂಡು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಜನರನ್ನು ತಲುಪುತ್ತಿರುವುದು ಸಂತೋಷ ತಂದಿದೆ.
– ಡಾ. ಅಪರ್ಣಾ ಶ್ರೀವತ್ಸ, ಹಿರಿಯ ಕ್ಯಾನ್ಸರ್ ತಜ್ಞರು
ಇದೇ ಸಮಾರಂಭದಲ್ಲಿ ‘ಸಮಾಜದಲ್ಲಿ ಕ್ಯಾನ್ಸರ್: ತಪ್ಪು ಕಲ್ಪನೆಗಳು, ಮಾಧ್ಯಮ ಮತ್ತು ಆರೋಗ್ಯʼ ವಿಷಯದ ಕುರಿತು ವೈದ್ಯರಾದ ಡಾ. ಮಂಗೇಶ್ ಕಾಮತ್, ಡಾ. ಸ್ಮಿತಾ ಸಲ್ಡಾನ್ಹಾ ಮತ್ತು ಡಾ. ಸ್ವರತಿಕ ಮಝುಂದಾರ್ ಅವರ ನೇತೃತ್ವದಲ್ಲಿ ಸಂವಾದ ನಡೆಯಿತು.

