SHIVAMOGGA LIVE NEWS | 29 FEBRUARY 2024
SHIMOGA : ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ಖಂಡಿಸಿ ಸುಡು ಬಿಸಿಲಿನಲ್ಲಿ ರೈತರು ಪಾದಯಾತ್ರೆ, ಟ್ರಾಕ್ಟರ್ ರಾಲಿ ನಡೆಸಿದರು.
ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರು, ನಿವಾಸಿಗಳ ಭೂ ಹಕ್ಕು ಹೋರಾಟ ಸಮಿತಿ ವತಿಯಿಂದ ಮಲವಗೊಪ್ಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಲಾಯಿತು. ಬಿ.ಹೆಚ್.ರಸ್ತೆ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ಸುಡು ಬಿಸಿಲಿನಲ್ಲಿ ನಡೆದ ಜನ
ಮಲವಗೊಪ್ಪದಿಂದ ಸುಡು ಬಿಸಿಲಿನಲ್ಲಿ ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಪಾದಯಾತ್ರೆ ಮಾಡಿದರು. ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ರಾಲಿಯಲ್ಲಿ ಇದ್ದರು.
ಡಿಸಿ ಕಚೇರಿ ಮುಂದೆ ಹೋರಾಟ
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಲಾಯಿತು. ಈ ಸಂದರ್ಭ ಹಲವು ಪ್ರಮುಖರು ಮಾತನಾಡಿದರು.
ಕೆ.ಟಿ.ಗಂಗಾಧರ್, ರೈತ ಮುಖಂಡ : ಜಾಗ ಸಕ್ಕರೆ ಕಾರ್ಖಾನೆಗೆ ಸೇರಿದ್ದು ಎಂಬ ಕಥೆ ಆಲಿಬಾಬಾ ಮತ್ತು ಚಾಲೀಸ್ ಚೋರ್ನಂತಿದೆ. ಯಾರೋ ಒಬ್ಬನಿಗೆ ಸೂಟು ಬೂಟು ಹಾಕಿಸಿ ಕರೆತಂದು ಮಾಲೀಕ ಎಂದು ಬಿಂಬಿಸಲಾಗುತ್ತಿದೆ. ನಾಳೆಯಿಂದ ಪ್ರತಿ ಹಳ್ಳಿಯ ಮುಂದೆ ಭೂಮಿ ನಮ್ಮದು ಎಂಬ ಬೋರ್ಡ್ ಹಾಕಿ. ಆತನನ್ನು ಯಾರೂ ಊರಿಗೆ ಸೇರಿಸಬಾರದು. ಕೇವಲ ಭಾವನಾತ್ಮಕ ಹೋರಟ ನಡೆಸದೆ ಕಾನೂನಾತ್ಮಕ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು.
ವಿಜಯಕುಮಾರ್, ಕಾಂಗ್ರೆಸ್ ಮುಖಂಡ : ಈ ವಿಚಾರವಾಗಿ ಹಲವು ಬಾರಿ ಅಡ್ವೊಕೇಟ್ ಜನರಲ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೆವು. ರೈತರ ಪರವಾಗಿ ವಾದಿಸುವಂತೆ ತಿಳಿಸಲಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕ ಎಂದುಕೊಂಡವನ ಬಳಿ ಯಾವುದೆ ದಾಖಲೆ ಇಲ್ಲ. ಒಂದೇ ಒಂದು ಪಹಣಿ ಕೂಡ ಆತನ ಬಳಿ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ಸಮಯ ಪಡೆಯುತ್ತೇನೆ. ನಿಯೋಗ ಹೋಗಿ ಚರ್ಚೆ ನಡೆಸೋಣ.
ಶಾರದಾ ಪೂರ್ಯಾನಾಯ್ಕ್, ಶಾಸಕಿ : ಅಧಿಕಾರಿಗಳು, ಹೋರಾಟ ಸಮಿತಿಯಿಂದ ದಾಖಲೆ ಪಡೆದು ಅಧ್ಯಯನ ಮಾಡಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದೆ. ಹಲವು ಸಂಗತಿ ಮರೆಮಾಚಿ ತರಲಾಗಿರುವ ಆದೇಶವೆ ತಪ್ಪು. ಸಕ್ಕರೆ ಕಾರ್ಖಾನೆ ಶುರುವಾಗುವ ಮೊದಲೆ ಇದ್ದ ಗ್ರಾಮಗಳ ಪರಿಸ್ಥಿತಿ ಏನು. ಅವರ ಅಸ್ಥಿತ್ವ ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹೋರಾಟಗಾರರ ನಡುವೆ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಚ್ಚರಿಕೆಯಿಂದ ಒಂದಾಗಿ ಹೋರಾಟ ನಡೆಸಬೇಕಿದೆ.
ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಕುಮಾರ್, ಮಹಾದೇವ್, ಕೃಷ್ಣಮೂರ್ತಿ, ರಾಜಶೇಖರ್ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 2 ಟೋಲ್ಗಳಲ್ಲಿ ಯಾವ್ಯಾವ ವಾಹನಕ್ಕೆ ಎಷ್ಟು ನಿಗದಿಯಾಗಿದೆ ದರ? ಇಲ್ಲಿದೆ ಲಿಸ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200