ಶಿವಮೊಗ್ಗ: ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಲಾಗಿದೆ. ಶೀಘ್ರವೇ ವಿಮಾನ ಸೇವೆ ಪುನಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. (ಈ ಸುದ್ದಿಯನ್ನು ಇನ್ನು 77 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ, ವಿಮಾನಯಾನ ಪುನಾರಂಭದ ಕುರಿತು ಮಾಹಿತಿ ನೀಡಿದರು. ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್.


ಉಡಾನ್ 6.0: ‘ಉಡಾನ್ 6.0’ ಯೋಜನೆ ಅಡಿ ಶಿವಮೊಗ್ಗ ಏರ್‌ಪೋರ್ಟ್‌ಗೆ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ 31 ರವರೆಗೆ ಏರ್‌ಲೈನ್ಸ್ ಸಂಸ್ಥೆಗಳು ಭಾಗವಹಿಸಲು ಅವಕಾಶವಿದೆ. ಈ ಬಾರಿ ನಿರ್ದಿಷ್ಟ ಮಾರ್ಗಗಳ ನಿರ್ಬಂಧವಿಲ್ಲ. ವಿಮಾನಯಾನ ಸಂಸ್ಥೆಗಳು ತಮ್ಮ ಆಯ್ಕೆಯ ಯಾವುದೇ ಮಾರ್ಗದಲ್ಲಿ ಶಿವಮೊಗ್ಗದಿಂದ ಸೇವೆ ಆರಂಭಿಸಬಹುದು. ಕೇಂದ್ರ ಸರ್ಕಾರವೇ ಸಬ್ಸಿಡಿ ನೀಡಲಿದೆ. ಈಗಾಗಲೇ ಮೂರು ಪ್ರಮುಖ ಏರ್‌ಲೈನ್ಸ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ವಿನಂತಿ: ಉಡಾನ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿಮಾನ ಸೇವೆ ಆರಂಭವಾಗಲು ಫೆಬ್ರವರಿ ಅಥವಾ ಮಾರ್ಚ್‌ವರೆಗೆ ಸಮಯ ಹಿಡಿಯಲಿದೆ. ಈ ಅವಧಿಯ ಮೂರ್ನಾಲ್ಕು ತಿಂಗಳ ಅವಧಿಗೆ ಶಿವಮೊಗ್ಗ – ಬೆಂಗಳೂರು ಹಾಗೂ ಶಿವಮೊಗ್ಗ – ಹೈದರಾಬಾದ್ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ವಿಮಾನ ಸೇವೆ ಒದಗಿಸಲು ರಾಜ್ಯ ಸರ್ಕಾರ ತನ್ನ ವಯಬಲಿಟಿ ಗ್ಯಾಪ್ ಫಂಡ್ (ವಿಜಿಎಫ್) ಯೋಜನೆಯಡಿ ನೆರವು ನೀಡಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು.

ಮುಂದಿನ 5 ವರ್ಷ ಆತಂಕವಿಲ್ಲ: ಈ ಹಿಂದೆ ಉಡಾನ್ ಒಪ್ಪಂದ ಮುಗಿದ ಬಳಿಕ ಕಾಮರ್ಷಿಯಲ್ ಬ್ರೇಕ್ ನಿಯಮ ಇರುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ತೊಡಕಿಲ್ಲ. ಒಮ್ಮೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಮುಂದಿನ ಐದು ವರ್ಷಗಳ ಕಾಲ ವಿಮಾನ ಸೇವೆ ನಿರಂತರವಾಗಿ ಇರಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಶ್ರಮದಿಂದ ಶಿವಮೊಗ್ಗ ವಿಮಾನ ನಿಲ್ದಾಣವು ಉಡಾನ್ 6.0 ಯೋಜನೆ ಅಡಿ ಸೇರ್ಪಡೆಯಾಗಿದೆ.
– ರಾಘವೇಂದ್ರ, ಶಿವಮೊಗ್ಗ ಸಂಸದ