ಶಿವಮೊಗ್ಗ ಯೋಧಾಸ್‌ ಚಾಂಪಿಯನ್‌, ಮುಡಿಗೇರಿತು ಮಹಾರಾಜ ಕಪ್‌, ಹೇಗಿತ್ತು ಫೈನಲ್‌ ಹಣಾಹಣಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಮಾಂಚನಕಾರಿ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಶಿವಮೊಗ್ಗ ಯೋಧಾಸ್‌ ತಂಡ, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ನೂತನ ಚಂಪಿಯನ್ ಆಗಿ ಹೊರಹೊಮ್ಮಿದೆ.

➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಬೆಂಗಳೂರಿಗೆ ಆಘಾತ ನೀಡಿದ ಧನುಷ್‌

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಸಮಿತ್ ದ್ರಾವಿಡ್ (37 ರನ್) ಹಾಗೂ ನಾಯಕ ಶುಭಾಂಗ್ ಹೆಗ್ಡೆ (31) ಚೇತರಿಕೆ ನೀಡಿದರು. ಕೊನೆಯ ಓವರ್‌ಗಳಲ್ಲಿ ವಹೀದ್ ಫೈಜಾನ್ ಖಾನ್ (29) ಮತ್ತು ರೋಹನ್ ನವೀನ್ (25) ಅವರ ಬಿರುಸಿನ ಆಟದ ನೆರದಿಂದ ಬೆಂಗಳೂರು ತಂಡ 8 ವಿಕೆಟ್‌ಗೆ 185 ರನ್‌ಗಳನ್ನು ಪೇರಿಸಿತು. ಶಿವಮೊಗ್ಗ ಪರ ಧನುಷ್ ಗೌಡ 38 ರನ್‌ಗಳಿಗೆ 2 ವಿಕೆಟ್ ಪಡೆದರು.

Shivamogga-Yodhas-wins-Maharaja-Cup-at-Bangalore-Chinnaswamy-Stadium

ಯೋಧಾಸ್‌ ಅಬ್ಬರದ ಬ್ಯಾಟಿಂಗ್‌

186 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ, ನಾಯಕ ಲವನೀತ್ ಸಿಸೋಡಿಯಾ (87 ರನ್, 45 ಎಸೆತ, 9 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಡೆಸಿ ಜಯದ ಹಾದಿ ಸುಗಮಗೊಳಿಸಿದರು. ಇವರಿಗೆ ಸಾಥ್ ನೀಡಿದ ಕೆ.ವಿ.ಅನೀಶ್ 38 ರನ್ ಬಾರಿಸಿದರು. ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 36 ರನ್‌ಗಳಿಗೆ 4 ವಿಕೆಟ್ ಪಡೆದು ಶಿವಮೊಗ್ಗಕ್ಕೆ ಆತಂಕ ತಂದಿಟ್ಟರೂ, ಅಂತಿಮವಾಗಿ ಯೋಧಾಸ್ ಪಡೆ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.

ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 185 (ಸಮಿತ್ 37, ಶುಭಾಂಗ್ 31). ಶಿವಮೊಗ್ಗ ಯೋಧಾಸ್: 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 186 (ಲವನೀತ್ 87, ಕೆ.ವಿ.ಅನೀಶ್ 38).

ಲವನೀತ್‌ ಸರಣಿ ಶ್ರೇಷ್ಠ

ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಒಟ್ಟು 465 ರನ್ ಗಳಿಸಿದ ಲವನೀತ್ ಸಿಸೋಡಿಯಾ ಸರಣಿ ಶ್ರೇಷ್ಠ ಹಾಗೂ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, 18 ವಿಕೆಟ್ ಕಬಳಿಸಿದ ಅಭಿಲಾಷ್ ಶೆಟ್ಟಿ ಅತ್ಯುತ್ತಮ ಬೌಲರ್ ಗೌರವಕ್ಕೆ ಪಾತ್ರರಾದರು. ಇನ್ನು ಇಡೀ ಟೂರ್ನಿಯಲ್ಲಿ 25 ಸಿಕ್ಸರ್ ಸಿಡಿಸಿದ ಎಲ್.ಆರ್. ಚೇತನ್ ಸೂಪರ್ ಸಿಕ್ಸರ್ ಪ್ರಶಸ್ತಿ ಗೆದ್ದರೆ, ಅರವಿಂದ್ ರೈ ಉದಯೋನ್ಮುಖ (ಎಮರ್ಜಿಂಗ್) ಆಟಗಾರನಾಗಿ ಹೊರಹೊಮ್ಮಿದರು. ಕರುಣ್ ನಾಯರ್ ಫೇರ್ ಪ್ಲೇ ಪ್ರಶಸ್ತಿಗೆ ಭಾಜನರಾದರೆ, ನಿಕಿನ್ ಜೋಸ್ ಟೂರ್ನಿಯ ಅತ್ಯುತ್ತಮ ಕ್ಯಾಚ್ ಹಾಗೂ ಶುಭಾಂಗ್ ಹೆಗ್ಡೆ ನಂಬಿಕಸ್ಥ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಶಿವಮೊಗ್ಗ ಯೋಧಾಸ್ ತಂಡದ ಅದ್ಭುತ ಸಾಧನೆ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿ ಕ್ರೀಡಾಭಿಮಾನಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಗೆಲುವು ತಂಡದ ಆಟಗಾರರ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಹಾಗೂ ತಂಡದ ಸಮರ್ಪಣೆಯ ಫಲವಾಗಿದೆ. ಮಹಾರಾಜ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಗಳು ರಾಜ್ಯದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿಂದ ಹೊರಹೊಮ್ಮುವ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಲಿ.

– ಡಿ.ಎಸ್. ಅರುಣ್, ನಿರ್ದೇಶಕ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!