SHIVAMOGGA LIVE NEWS | 12 JANUARY 2024
SHIMOGA : ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಈ ಸಮಸ್ಯೆಯನ್ನು ದೂರಗೊಳಿಸಿ, ಯುವಕರಲ್ಲಿ ಆತ್ಮಶಕ್ತಿ ತುಂಬುವುದು ಯುವನಿಧಿ ಯೋಜನೆಯ ಮೂಲ ಉದ್ದೇಶ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಭತ್ಯೆ ನೀಡುವುದರ ಜೊತೆಗೆ ಕೌಶಲ್ಯ ಅಭಿವೃದ್ಧಿಗು ಯೋಜನೆ ಸಿದ್ದಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
![]() |
ನಗರದ ಫ್ರೀಡಂ ಪಾರ್ಕ್‌ನಲ್ಲಿ ಭತ್ತ ತುಂಬಿದ ಕೊಳಗದಲ್ಲಿ ಹೊಂಬಾಳೆ ಅನಾವರಣ ಮಾಡುವ ಮೂಲಕ ಯುವನಿಧಿ ಯೋಜನೆಗೆ ಚಾಲನೆ ನೀಡಿದರು. ರಾಷ್ಟ್ರೀಯ ಯುವದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ಸಿಎಂ ಹೇಳಿದ ಮೂರು ಪಾಯಿಂಟ್
ಪದವಿ ಮತ್ತು ಡಿಪ್ಲೋಮಾ ಪಡೆದು ಉದ್ಯೋಗ ಲಭಿಸದೆ ಇರುವ ಯುವಕರಿಗೆ ಎರಡು ವರ್ಷದವರೆಗೆ ಪ್ರತಿ ತಿಂಗಳು ಭತ್ಯೆ ನೀಡಲಾಗುತ್ತದೆ. ಮಾರುಕಟ್ಟೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಕೌಶಲ್ಯದ ಅಗತ್ಯವಿದೆಯೊ ಅದಕ್ಕೆ ತಕ್ಕ ಕೌಶಲ್ಯಾಭಿವೃದ್ಧಿಗು ಒತ್ತು ನೀಡಲಾಗುತ್ತಿದೆ. ಜೊತೆಗೆ ಉದ್ಯೋಗ ಮೇಳಗಳನ್ನು ಆಯೋಜಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು ಈ ಯೋಜನೆಯ ಪ್ರಮುಖ ಗುರಿ.
ದೇಶದಲ್ಲಿ 2014ರಲ್ಲಿ ನಿರುದ್ಯೋಗ ಪ್ರಮಾಣ ಶೇ.5.5ರಷ್ಟಿತ್ತು. ಈಗ ಶೇ.10.5ಕ್ಕೆ ಏರಿಕೆಯಾಗಿದೆ. ಇದೆ ಕಾರಣಕ್ಕೆ ರಾಜ್ಯ ಸರ್ಕಾರ ಯುವನಿಧಿ ಯೋಜನೆ ಜಾರಿಗೊಳಿಸಿದೆ.
ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರಸ್ತುತ ರಾಜ್ಯದಲ್ಲಿ 1.20 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಐದರಿಂದ ಆರು ಸಾವಿರ ರೂ.ವರೆಗು ನೆರವು ದೊರಯುತ್ತಿದೆ. ಐರೋಪ್ಯ ದೇಶಗಳಲ್ಲಿ ಇಂತಹ ಯೋಜನೆಗಳನ್ನು ಸಾರ್ವತ್ರಿಕ ಮೂಲ ಆದಾಯ ಹೆಚ್ಚಳದ ಕಾರ್ಯಕ್ರಮ ಎಂದು ಕರೆಯಲಾಗುತ್ತದೆ.
ಕಳೆದ ವರ್ಷ ಮೇ 20ರಂದು ಅಧಿಕಾರ ಸ್ವೀಕರಿಸುದ ತಕ್ಷಣ ಸಂಪುಟ ಸಭೆ ನಡೆಸಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡೆವು. ಜೂ.11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಈಗ 130.28 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. 1.65 ಕೋಟಿ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿ ಕೊಡುವ ಭರವಸೆ ನೀಡಿದ್ದೆವು. ಮಾರುಕಟ್ಟೆಯಲ್ಲಿ ಅಕ್ಕಿ ಸಿಗಲಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಒದಗಿಸಲಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ 170 ರೂ. ನೀಡಲಾಗುತ್ತಿದೆ. 1.18 ಕೋಟಿ ಕುಟುಂಬದ ಯಜಮಾನಿಯರಿಗೆ 2 ಸಾವಿರ ರೂ. ನೀಡುತ್ತಿದ್ದೇವೆ. ಚುನಾವಣೆ ಸಂದರ್ಭ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ.
ಇದನ್ನೂ ಓದಿ – ‘ಐದು ಗ್ಯಾರಂಟಿ ಬದಲು ಭೂಮಿ ಭಾಗ್ಯ ಕರುಣಿಸಬೇಕಿತ್ತು, ಎಲ್ಲೋಯ್ತು ಮಲೆನಾಡ ಸಮಸ್ಯೆಗಳ ವರದಿ?ʼ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200