ಶಿವಮೊಗ್ಗ : ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಸಾವಿರಕ್ಕೂ ಅಧಿಕ ಜನರು ಇವತ್ತು ಶಿವಮೊಗ್ಗದಿಂದ ವಿಶೇಷ ರೈಲಿನಲ್ಲಿ (Special Train) ತೆರಳಿದರು. ಸಂಸದ ಬಿ.ವೈ.ರಾಘವೇಂದ್ರ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಸಂಜೆ 4.40ಕ್ಕೆ ಉತ್ತರ ಪ್ರದೇಶದಿಂದ ಪ್ರಯಾಗ್ರಾಜ್ಗೆ ರೈಲು ಹೊರಟಿತು.
ಸೆಲ್ಫಿ, ಫೋಟೊ ತೆಗೆದು ಸಂಭ್ರಮ
ಕುಂಭ ಮೇಳ ಕಣ್ತುಂಬಿಕೊಳ್ಳಲು ಮತ್ತು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಜಿಲ್ಲೆಯ ವಿವಿಧೆಡೆಯ ಸಾವಿರಕ್ಕೂ ಅಧಿಕ ಮಂದಿ ಶಿವಮೊಗ್ಗದಿಂದ ರೈಲಿನಲ್ಲಿ ತೆರಳುತ್ತಿದ್ದಾರೆ. ಅವರನ್ನು ಬೀಳ್ಕೊಡಲು ಕುಟುಂಬದವರು, ಸ್ನೇಹಿತರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಇವರೆಲ್ಲ ಫೋಟೊ, ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.
ನಾಳೆ ಬಿ.ಇಡಿ ಸಂಸ್ಕೃತದ ಪರೀಕ್ಷೆ ಇದೆ. ಆದರೂ ಪರೀಕ್ಷೆ ಬಿಟ್ಟು ಪತಿಯ ಜೊತೆಗೆ ನಾನು ಕುಂಭ ಮೇಳಕ್ಕೆ ತೆರಳುತ್ತಿದ್ದೇನೆ. ನಮ್ಮ ಜನ್ಮದಲ್ಲಿ ಒಮ್ಮೆ ಮಾತ್ರ ಮಹಾಕುಂಭ ಮೇಳ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಪರೀಕ್ಷೆಯನ್ನು ಮತ್ತೊಮ್ಮೆ ಎದುರಿಸಬಹುದು. ಬುಕಿಂಗ್ ಸಂದರ್ಭ ನನ್ನದೇ ಕೊನೆಯ ಟಿಕೆಟ್. ಆ ಬಳಿಕ ಟಿಕೆಟ್ಗಳೆ ಲಭ್ಯವಿರಲಿಲ್ಲ. ಇದು ಸೌಭಾಗ್ಯ.
ಇಂದೂಮತಿ ಉಮೇಶ್, ಶಿವಮೊಗ್ಗ ನಿವಾಸಿ
ರೈಲ್ವೆ ನಿಲ್ದಾಣದಲ್ಲಿ ಜೈ ಶ್ರೀರಾಮ್ ಘೋಷಣೆ
ಬಹತೇಕ ಪ್ರಯಾಣಿಕರು ಕೇಸರಿ ಶಾಲು, ಪೇಟ ತೊಟ್ಟಿದ್ದರು. ರೈಲು ಹತ್ತುತ್ತಿದ್ದಂತೆ ಯುವಕರ ಗುಂಪು ಅಲ್ಲಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಇನ್ನು, ರೈಲು ಹೊರಡುತ್ತಿದ್ದಂತೆ ಜೈ ಶ್ರೀರಾಮ್, ಹರ ಹರ ಮಹಾದೇವ ಜೊತೆಗೆ ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ಘೋಷಣೆ ಕೇಳಿ ಬಂತು.
ಪ್ರತಿ ಬೋಗಿಗು ತೆರಳಿ ಶುಭ ಕೋರಿದ ಸಂಸದ
ಇನ್ನು, ಪ್ರಯಾಗ್ರಾಜ್ಗೆ ತೆರಳುತ್ತಿರುವವರಿಗೆ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸೇರಿದಂತೆ ಹಲವು ಪ್ರಮುಖರು ಬೀಳ್ಕೊಡುಗೆ ನೀಡಿದರು.
ರೈಲಿನ ಪ್ರತಿ ಬೋಗಿ ಬಳಿ ತೆರಳಿದ ಸಂಸದ ರಾಘವೇಂದ್ರ ಅಲ್ಲಲ್ಲಿ ಜನರನ್ನು ಮಾತನಾಡಿಸಿ, ಸೆಲ್ಫಿ ನೀಡಿ ಶುಭ ಹಾರೈಸಿ ಬೀಳ್ಕೊಡುಗೆ ನೀಡಿದರು. ಬಳಿಕ ಹಸಿರು ನಿಶಾನೆ ತೋರಿಸಿ ಪ್ರಯಾಗ್ರಾಜ್ ವಿಶೇಷ ರೈಲಿಗೆ ಚಾಲನೆ ನೀಡಿದರು.
ಸಂಸದ ರಾಘವೇಂದ್ರ ಹೇಳಿದ್ದೇನು?
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕಟ್ಟ ಕಡೆಯ ವ್ಯಕ್ತಿಯುವ ಕುಂಭ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಸಂಕಲ್ಪ. ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು 1200 ಮಂದಿ ಪ್ರಯಾಗ್ರಾಜ್ಗೆ ತೆರಳಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಇದೆ. ವಿಶೇಷ ರೈಲಿನ ವ್ಯವಸ್ಥೆ ಮಾಡಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ರಾಜ್ಯ ಸಚಿವರಾದ ವಿ.ಸೋಮಣ್ಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಈ ರೈಲು ಫೆಬ್ರವರಿ 25ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗರಾಜ್ನಿಂದ (ರೈಲು ಸಂಖ್ಯೆ 06224) ಹೊರಟು ಫೆಬ್ರವರಿ 27ರ ಬೆಳಿಗ್ಗೆ 6.45ಕ್ಕೆ ಶಿವಮೊಗ್ಗ ತಲುಪಲಿದೆ.
ಇದನ್ನೂ ಓದಿ » ಕುಂಸಿ, ಅರಸಾಳು ನಿಲ್ದಾಣಗಳಲ್ಲಿ ಎರಡು ಎಕ್ಸ್ಪ್ರೆಸ್ ರೈಲುಗಳ ಸ್ಟಾಪ್ ಮುಂದುವರಿಕೆ, ಯಾವ್ಯಾವ ರೈಲುಗಳು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200