ನಗರಸಭೆ ಆಯುಕ್ತರಿಗೆ 20 ದಿನದ ಗಡುವು, ತಪ್ಪಿದರೆ ಕೇಸ್‌ ದಾಖಲು, ಶಿವಮೊಗ್ಗ ಡಿಸಿ ವಾರ್ನಿಂಗ್

ಶಿವಮೊಗ್ಗ: ಜಿಲ್ಲೆಯಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳ ತಡೆ, ಸಂತ್ರಸ್ತರಿಗೆ ತ್ವರಿತ ನ್ಯಾಯ ಹಾಗೂ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪ್ರಕರಣಗಳ ತನಿಖೆ ಮತ್ತು ಪರಿಹಾರ ಧನ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Shivamogga-DC-Prabhulinga-Kavalikatti-holds-meeting.webp

ಪೌರಕಾರ್ಮಿಕ ರತ್ನಮ್ಮ ಅವರಿಗೆ ಭದ್ರಾವತಿಯಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಹಂಚಿಕೆಯಾದ ಮನೆಯಲ್ಲಿ ಬೇರೆಯವರು ಅಕ್ರಮವಾಗಿ ವಾಸಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು 20 ದಿನಗಳ ಒಳಗೆ ನಗರಸಭೆ ಪೌರಾಯುಕ್ತರು ಮನೆ ಖಾಲಿ ಮಾಡಿಸಿ ಅರ್ಹ ಫಲಾನುಭವಿಗೆ ನೀಡದಿದ್ದಲ್ಲಿ ಪೌರಾಯುಕ್ತರ ವಿರುದ್ಧವೇ ಪ್ರಕರಣ ದಾಖಲಿಸಿ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದ 49 ದಲಿತ ಕುಟುಂಬಗಳಿಗೆ ಪಿಟಿಸಿಎಲ್ ದಾಖಲೆಯಂತೆ ಭೂಮಿ ಮಂಜೂರಾಗಿರುವ ಕುರಿತು ಜಂಟಿ ಸರ್ವೇ ನಡೆಸಿ ಶೀಘ್ರ ವರದಿ ನೀಡಬೇಕು. ಫಲಾನುಭವಿಗಳಿಗೆ ಶೀಘ್ರ ಭೂಮಿ ಸಿಗಲು ಭದ್ರಾವತಿ ತಹಶೀಲ್ದಾರ್ ಹಾಗೂ ಎಸಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು. ಶಿವಮೊಗ್ಗ ನಗರದ ಬುದ್ಧನಗರ ಹಾಗೂ ಅಂಬೇಡ್ಕರ್ ನಗರದ ಸ್ಲಂ ನಿವಾಸಿಗಳಿಗೆ ರಸ್ತೆ ಮತ್ತು ಖಾತೆ ಮಾಡಿಕೊಡುವ ಸಂಬಂಧ ಗುರುವಾರವೇ ತಹಶೀಲ್ದಾರ್, ಎಡಿಎಲ್‌ಆರ್ ಹಾಗೂ ಪಾಲಿಕೆ ಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.

ಗ್ರಾಮೀಣ ಭಾಗದ ದೇವಸ್ಥಾನಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಪ್ರವೇಶ ನಿಷೇಧಿಸಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಸದಸ್ಯರು ದೂರಿದರು. ಆಗ ಜಿಲ್ಲಾಧಿಕಾರಿ ಅವರು ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶವಿರುವ ಕುರಿತು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಉಳವಿ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಸ್ಮಶಾನಕ್ಕೆ ಜಾಗ ಒದಗಿಸಲು ತಹಶೀಲ್ದಾರ್ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಯಡಿ ಡಿಸಿಆರ್‌ಇ ಠಾಣೆಗಳಲ್ಲಿ 23 ಹಾಗೂ ಇತರೆ ಠಾಣೆಗಳಲ್ಲಿ 138 ಸೇರಿ ಒಟ್ಟು 161 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 73 ಪ್ರಕರಣಗಳಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. 26 ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಕೆಯಾಗಿದೆ. 2026ನೇ ಸಾಲಿನಲ್ಲಿ ದಾಖಲಾದ ಪ್ರಕರಣಗಳಲ್ಲಿ ಎಫ್‌ಐಆರ್ ಹಂತದಲ್ಲಿ ₹52 ಲಕ್ಷ ಹಾಗೂ ಚಾರ್ಜ್‌ಶೀಟ್ ಹಂತದಲ್ಲಿ ₹16 ಲಕ್ಷ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಉಪವಿಭಾಗಾಧಿಕಾರಿ ಡಾ. ಮೈತ್ರಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ ಹಾಗೂ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವಬಸಪ್ಪ, ರುದ್ರಪ್ಪ ಎಚ್., ಬಸವರಾಜು ಡಿ., ಎಂ. ಮಂಜುನಾಥ್, ನಾಗರಾಜ, ಓಂ ಪ್ರಕಾಶ್ ಬಿ.ಎಂ. ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.