‘ದಸರಾ ಉತ್ಸವ ಉದ್ಘಾಟನೆಯನ್ನು ಗವಿಸಿದ್ದೇಶ್ವರ ಸ್ವಾಮೀಜಿ ನಿರಾಕರಿಸಬೇಕುʼ

ಶಿವಮೊಗ್ಗ: ರಾಜ್ಯದ 217 ತಾಲ್ಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇರುವ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ದಸರಾ ಉತ್ಸವ ಆಚರಿಸುವುದು ಸೂಕ್ತವಲ್ಲ. ಹೀಗಾಗಿ 2026ರ ದಸರಾ ಉತ್ಸವ ಉದ್ಘಾಟನೆಗೆ ನೀಡಿರುವ ಆಹ್ವಾನವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೈತಿಕತೆಯ ಆಧಾರದ ಮೇಲೆ ನಿರಾಕರಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ₹46,324 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಮೀಜಿ ಭೇಟಿಯಾಗಿ ಒತ್ತಾಯಿಸಬೇಕು ಎಂದರು.

Kalluru-Megharaj-Press-meet-in-Shimoga

ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಅಂತರ್‌ ಸಚಿವಾಲಯ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಎನ್‌ಡಿಆರ್‌ಎಫ್‌ ಮಾನದಂಡದಡಿ ₹46,324 ಕೋಟಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟಿಸುವುದಕ್ಕಿಂತ ಬರ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರುವುದು ಸೂಕ್ತ ಎಂದು ಹೇಳಿದರು.

ರೈತರು, ಜನಸಾಮಾನ್ಯರು, ಜಾನುವಾರುಗಳು ಹಾಗೂ ಪಶು–ಪಕ್ಷಿಗಳು ಕುಡಿಯುವ ನೀರು ಮತ್ತು ಮೇವಿಗಾಗಿ ಪರದಾಡುತ್ತಿರುವಾಗ ಅದ್ಧೂರಿ ದಸರಾ ಆಚರಣೆ ನಡೆಸುವುದು ಸರಿಯಲ್ಲ. ಸರ್ಕಾರ ಬರ ಪರಿಸ್ಥಿತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

##ಕಡಿದಾಳ್ ಶಾಮಣ್ಣ ಮಾದರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲಿ ಸಮಾಜವಾದಿ ಲೇಖಕ, ಚಿಂತಕ ಹಾಗೂ ರೈತ ಮುಖಂಡ ಕಡಿದಾಳ್ ಶಾಮಣ್ಣ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿತ್ತು. ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರು ಆಹ್ವಾನವನ್ನು ನಿರಾಕರಿಸಿದ್ದರು. ಅಗತ್ಯವಿದ್ದರೆ ವಿಧಾನಸೌಧದ ಮೆಟ್ಟಿಲುಗಳ ಕಸ ಗುಡಿಸಲು ಸಿದ್ಧ, ಆದರೆ ದಸರಾ ಉದ್ಘಾಟಿಸುವುದಿಲ್ಲ ಎಂಬ ನಿಲುವು ತಳೆದಿದ್ದರು ಎಂದು ಮೇಘರಾಜ್ ನೆನಪಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ₹5,300 ಕೋಟಿ ಅನುದಾನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಪ್ರಧಾನಿ ಅವರನ್ನು ಸ್ವಾಮೀಜಿ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್.ಎಂ.ಸಂಗಯ್ಯ, ಎಸ್.ಪಿ. ಶೇಷಾದ್ರಿ, ಆಲೀಂ ಖಾನ್, ಶಿವಣ್ಣ, ಪ್ರಭಾಕರ್, ಸಣ್ಣನಾಯಕ, ಆದಿಶೇಷ ಹಾಗೂ ಸಂಧ್ಯಾ ರಾಗಿಗುಡ್ಡ ಇದ್ದರು.