ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಸಿಂಹ ಕಟಾಂಜನ ಶಾಸನವನ್ನು ಕನ್ನಡದ ಮೊಟ್ಟಮೊದಲ ಶಾಸನ ಎಂದು ಘೋಷಿಸಿ ಮಾನ್ಯತೆ ನೀಡಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಈ ಶಾಸನವು ಹಲ್ಮಿಡಿ ಶಾಸನಕ್ಕಿಂತಲೂ ಸುಮಾರು 70 ವರ್ಷಗಳಷ್ಟು ಹಳೆಯದಾಗಿದೆ. 2013-14 ರಲ್ಲಿ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಕಾಲಮಾನ ಕ್ರಿ.ಶ. 370 ರಿಂದ 400ರ ನಡುವಿನದ್ದಾಗಿದೆ ಎಂದರು.

ವೇದಿಕೆಯ ತಾಲ್ಲೂಕು ಅಧ್ಯಕ್ಷ ಶಿವಯ್ಯ ಎನ್. ಶಾಸ್ತ್ರಿ ಮಾತನಾಡಿ, ಈ ಶಾಸನದಲ್ಲಿ ಮಯೂರ ಶರ್ಮನ ಜನನ, ವಿದ್ಯಾಭ್ಯಾಸಕ್ಕಾಗಿ ಕಂಚಿಗೆ ತೆರಳಿದ್ದು ಹಾಗೂ ಪಲ್ಲವರೊಡನೆ ನಡೆದ ಯುದ್ಧದ ಉಲ್ಲೇಖಗಳಿವೆ. ಇದು ಕನ್ನಡ ಲಿಪಿಯ ಮೂಲ ಹಾಗೂ ಪ್ರಾಚೀನತೆಯನ್ನು ನಿರೂಪಿಸಲು ಸಹಕಾರಿಯಾಗಿದೆ. ಶಾಸನ ದೊರೆತಿರುವ ಖಾಸಗಿ ಜಮೀನನ್ನು ಸರ್ಕಾರ ಪುರಾತತ್ವ ಇಲಾಖೆಗೆ ಸೇರ್ಪಡೆಗೊಳಿಸಿ, ಸೂಕ್ತ ಸಂರಕ್ಷಣೆ ಹಾಗೂ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಘುವೀರ್ ಸಿಂಗ್, ವಕೀಲ ನಾಗರಾಜ್, ಶ್ರೀನಿವಾಸ್, ನವೀನ್, ವಿಜಯಕುಮಾರ್ ಹಾಗೂ ಶಶಿಧರ್ ಉಪಸ್ಥಿತರಿದ್ದರು.