ವಿಡಿಯೋ ವೈರಲ್‌ ಬೆನ್ನಿಗೆ ಶಿವಮೊಗ್ಗದ ಇಬ್ಬರು ಪೊಲೀಸರು ವರ್ಗಾವಣೆ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಶಿವಮೊಗ್ಗ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರನ್ನು  ಹೊತ್ತು ಕುಣಿದ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವಿಡಿಯೋ ವೈರಲ್‌ ಬೆನ್ನಿಗೆ ಶಿಸ್ತು ಕ್ರಮದ ಭಾಗವಾಗಿ ವರ್ಗಾವಣೆ ಮಾಡಲಾಗಿದೆ.

ಶಾಸಕರನ್ನು ಎತ್ತಿ ಕುಣಿದಿದ್ದೇಕೆ?

ಶಿವಮೊಗ್ಗದ ಪೂರ್ವ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನೆ ಪೂರ್ವ ಮೆರವಣಿಗೆ ನಡೆಯುತಿತ್ತು. ಪೊಲೀಸ್‌ ಸಿಬ್ಬಂದಿ ಮತ್ತು ಅವರ ಕುಟುಂಬದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡೊಳ್ಳು ಶಬ್ದಕ್ಕೆ ಪೊಲೀಸರು ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭ ಆಗಮಿಸಿದ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರನ್ನು ಪೊಲೀಸ್‌ ಸಿಬ್ಬಂದಿ ಉತ್ಸಾಹದಲ್ಲಿ ಹೊತ್ತು ಕುಣಿದಿದ್ದರು.

Two-Policemen-transferred-after-the-lifted-mla-and-danced-while-on-duty

ವೈರಲ್‌ ಆಯ್ತು ವಿಡಿಯೋ

ಶಿವಮೊಗ್ಗದ ಇನ್‌ಸ್ಟಾಗ್ರಾಂ ಇನ್‌ಫ್ಲೂಯನ್ಸರ್‌ ಒಬ್ಬರು ಗಣಪತಿ ಮೆರವಣಿಗೆ, ಪೊಲೀಸರ ಸಂಭ್ರಮದ ವಿಡಿಯೋ ಚಿತ್ರೀಕರಣ ಮಾಡಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಇದನ್ನು ಗಮನಿಸಿದ ಕೆಲವರು ವಿಡಿಯೋದ ಸ್ಕ್ರೀನ್‌ ರೆಕಾರ್ಡ್‌ ಮಾಡಿ ವೈರಲ್‌ ಮಾಡಿದ್ದರು. ಶಾಸಕರೊಬ್ಬರನ್ನು ಹೊತ್ತು ಕುಣಿಯುವ ಪೊಲೀಸರಿಂದ ನಿಷ್ಪಕ್ಷಪಾತ ಸೇವೆ ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದ್ದರು.

ಮಾಧ್ಯಮಗಳಲ್ಲು ಸುದ್ದಿ ಪ್ರಸಾರ

ಇನ್ನೊಂದೆಡೆ ವಿಡಿಯೋ ವೈರಲ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆ ಮಾಧ್ಯಮಗಳಲ್ಲು ವರದಿ ಪ್ರಕಟವಾಗಿದೆ. ಇದರ ಬೆನ್ನಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಚಾರ ಠಾಣೆಯ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಪೊಲೀಸ್‌ ಸಿಬ್ಬಂದಿ ಗಣೇಶ್‌ ಅವರನ್ನು ಆಗುಂಬೆ ಪೊಲೀಸ್‌ ಠಾಣೆಗೆ ಮತ್ತು ಪ್ರಕಾಶ್‌ ಅವರನ್ನು ಆನವಟ್ಟಿ ಪೊಲೀಸ್‌ ಠಾಣೆಗೆ ವರ್ಗಾಯಿಸಿ ಜಿಲ್ಲಾ ರಕ್ಷಣಾಧಿಕಾರಿ ಆದೇಶಿಸಿದ್ದಾರೆ.

ವರ್ಗಾವಣೆ ಆದೇಶದಲ್ಲಿ ಏನಿದೆ?

ಕಾನೂನು, ಸುವ್ಯವಸ್ಥೆ ದೃಷ್ಟಿಯಿಂದ ಮತ್ತು ಗಣೇಶ ಬಂದೋಬಸ್ತ್‌ ಹಿನ್ನೆಲೆ ಈ ಸಿಬ್ಬಂದಿಯನ್ನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ಗೆ ಆದೇಶದಲ್ಲಿ ಸೂಚಿಸಿದ್ದಾರೆ. ಇನ್ನು, ಸಿಬ್ಬಂದಿ ತಕ್ಷಣವೇ ಆ ಠಾಣೆಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

ಸಮವಸ್ತ್ರದಲ್ಲಿ ಇದ್ದಾಗಲೇ ಸಹೋದ್ಯೋಗಿಗಳ ಜೊತೆಗೆ ಉತ್ಸಾಹದಲ್ಲಿ ಹೆಜ್ಜೆ ಹಾಕಿದ್ದೇ ಇಬ್ಬರು ಪೊಲೀಸರಿಗೆ ಸಮಸ್ಯೆಯಾದಂತಾಗಿದೆ. ಈಗ ವರ್ಗಾವಣೆ ಮಾಡಿರುವುದು ಪುನಃ ಪರ, ವಿರೋಧ ಚರ್ಚೆಗೆ ಹುಟ್ಟುಹಾಕಿದೆ.