ಶಿವಮೊಗ್ಗದ ವಾಹನ ಸವಾರರೆ; 20 ದಿನ ಅವಕಾಶ, ಪ್ರಯೋಜನ ಪಡೆಯವಂತೆ ಸೂಚನೆ, ಏನಿದು?

ಶಿವಮೊಗ್ಗ: ವಾಹನ ಸವಾರರ ಅನುಕೂಲಕ್ಕಾಗಿ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ತಿಳಿಸಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಮೇ ತಿಂಗಳಿಗಿಂತಲು ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸಲಿದೆ. ಜೂನ್ 21 ರಿಂದ ಜುಲೈ 10 ರವರೆಗೆ ಒಟ್ಟು 20 ದಿನಗಳ ಈ ಅವಕಾಶ ಲಭ್ಯವಿರಲಿದೆ. ಸಾರ್ವಜನಿಕರು ಆನ್‌ಲೈನ್ ಲಿಂಕ್ (https://103.195.218.159/challan) ಮೂಲಕ ಅಥವಾ ನಗರದ ಪೂರ್ವ, ಪಶ್ಚಿಮ ಹಾಗೂ ಭದ್ರಾವತಿ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಬಹುದು. ಇದಲ್ಲದೆ, ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್ ಹಾಗೂ ಪೊಲೀಸ್ ಚೌಕಿ ಸರ್ಕಲ್‌ಗಳ ಕಿಯೋಸ್ಕ್‌ಗಳಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದರು.

Shimoga-Judge-Manjunath-Press-meet

ಶಿವಮೊಗ್ಗ ನಗರದಲ್ಲಿ ಸದ್ಯ ₹23.71 ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಉಳಿದಿದೆ ಎಂದು ಅವರು ವಿವರ ನೀಡಿದರು.

Nanjappa Hospital Advertisement

ರಾಷ್ಟ್ರೀಯ ಲೋಕ ಅದಾಲತ್

ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಜುಲೈ 11 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕೌಟುಂಬಿಕ ವಿವಾದ, ಅಪಘಾತ ಪರಿಹಾರ, ಚೆಕ್ ಅಮಾನ್ಯ, ಸಿವಿಲ್ ದಾವೆಗಳು ಸೇರಿ ವಿವಿಧ ಪ್ರಕರಣಗಳನ್ನು ಇಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಮಾರ್ಚ್ 14 ರಂದು ನಡೆದ ಮೊದಲ ಅದಾಲತ್‌ನಲ್ಲಿ ದಾಖಲೆ ಮಟ್ಟದ 14,501 ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹28.48 ಕೋಟಿಗೂ ಅಧಿಕ ಪರಿಹಾರ ವಿತರಿಸಲಾಗಿತ್ತು. ಇದೇ ವೇಳೆ ಚೆಕ್ ಅಮಾನ್ಯ ಪ್ರಕರಣಗಳಿಗಾಗಿ ಜುಲೈ 18 ಮತ್ತು ನವೆಂಬರ್ 21 ರಂದು ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದರು.

ಸುಪ್ರೀಂ ಪ್ರಕರಣಗಳಿಗೆ ‘ಸಮಾಧಾನ್ ಸಮಾರೋಹ್’

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಆಗಸ್ಟ್ 21, 22 ಮತ್ತು 23 ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಿಗಾಗಿ ಸಮಾಧಾನ್ ಸಮಾರೋಹ್ ವಿಶೇಷ ಲೋಕ ಅದಾಲತ್ ನಡೆಯಲಿದೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ 23 ಪ್ರಕರಣಗಳನ್ನು ಈಗಾಗಲೇ ಗುರುತಿಸಿ ಕಳುಹಿಸಿಕೊಡಲಾಗಿದ್ದು, ಮಧ್ಯಸ್ಥಗಾರರ ಮೂಲಕ ಇವುಗಳನ್ನು ಬಗೆಹರಿಸಲಾಗುವುದು ಎಂದು ನ್ಯಾಯಾಧೀಶರು ವಿವರಿಸಿದರು. ಸಾರ್ವಜನಿಕ ಉಪಯುಕ್ತ ಸೇವೆಗಳ ವಿವಾದಗಳಿಗಾಗಿ ಖಾಯಂ ಲೋಕ ಅದಾಲತ್ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

5 ಕೋಟಿ ಸಸಿ ನೆಡುವ ಅಭಿಯಾನ

ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ದುರುಪಯೋಗ ತಡೆಗಟ್ಟಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದರ ಜೊತೆಗೆ, ಪರಿಸರ ಸಂರಕ್ಷಣೆಗಾಗಿ ಬೆಂಗಳೂರಿನ ಧರೆ ಫೌಂಡೇಶನ್ ಸಹಯೋಗದೊಂದಿಗೆ ಬೃಹತ್ ಹಸಿರು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 5 ಕೋಟಿ ಸಸಿಗಳನ್ನು ನೆಟ್ಟು, 5 ವರ್ಷಗಳ ಕಾಲ ಪ್ರಾಧಿಕಾರದ ವತಿಯಿಂದಲೇ ಅವುಗಳನ್ನು ರಕ್ಷಿಸಿ ಪೋಷಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಹಾಗೂ ಸಂಚಾರ ಪೊಲೀಸ್ ಅಧಿಕಾರಿ ದೇವರಾಜ್ ಉಪಸ್ಥಿತರಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion