ಶಿವಮೊಗ್ಗ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜನೆಯ 16 ವರ್ಷದೊಳಗಿನವರ ಪ್ರತಿಷ್ಠಿತ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ‘ಸಿ’ ಗುಂಪಿನ ಪಂದ್ಯಗಳು ನವೆಂಬರ್ 14 ರಿಂದ ಡಿಸೆಂಬರ್ 8 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿವೆ. (ಈ ಸುದ್ದಿಯನ್ನು ಇನ್ನು 61 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಜಂಟಿ ಕಾರ್ಯದರ್ಶಿ ಬಿ.ಕೆ. ರವಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಈ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಶಿವಮೊಗ್ಗದಲ್ಲಿ 4ನೇ ಬಾರಿಗೆ ಆಯೋಜಿಸುತ್ತಿದೆ ಎಂದು ತಿಳಿಸಿದರು.

‘ಸಿ’ ಗುಂಪಿನಲ್ಲಿ ಚಂಡೀಗಢ, ಗುಜರಾತ್, ಉತ್ತರ ಪ್ರದೇಶ, ಹೈದರಾಬಾದ್, ಹರಿಯಾಣ ಹಾಗೂ ಒಡಿಶಾ ತಂಡಗಳು ಸೆಣಸಲಿವೆ. ಸವಳಂಗ ರಸ್ತೆಯ ಕೆಎಸ್ಸಿಎ ಎರಡು ಕ್ರೀಡಾಂಗಣಗಳು ಹಾಗೂ ಜೆಎನ್ಎನ್ಸಿಇ ಕಾಲೇಜಿನ ಟರ್ಫ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದರು.
ಒಟ್ಟು 15 ಪಂದ್ಯಗಳು ಜರುಗಲಿದ್ದು, ಪ್ರತಿ ಪಂದ್ಯವೂ 3 ದಿನಗಳ ಅವಧಿಯದ್ದಾಗಿರಲಿದೆ. ಕೆಂಪು ಚೆಂಡಿನಲ್ಲಿ ನಡೆಯುವ ಈ ಪಂದ್ಯಗಳು ಪ್ರತಿದಿನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿವೆ.
ಕೆಎಸ್ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್. ಅರುಣ್ ಮಾತನಾಡಿ, ಲಕ್ನೋದಲ್ಲಿ ಆಡಲಿರುವ ಕರ್ನಾಟಕ ‘ಬಿ’ ಗುಂಪಿನ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ನವೆಂಬರ್ 14 ರ ಬೆಳಿಗ್ಗೆ 8.30ಕ್ಕೆ ಕೆಎಸ್ಸಿಎ ನವುಲೆ ಕ್ರೀಡಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಹಾಗೂ ಜೆಎನ್ಎನ್ಸಿಇ ಕಾಲೇಜ್ ಕ್ರೀಡಾಂಗಣದಲ್ಲಿ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಅವರು ಟೂರ್ನಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ಆರ್.ಬಿ. ನಾಗರಾಜ್, ಕಿರಣ್ ಮತ್ತು ಐಡಿಯಲ್ ಗೋಪಿ ಉಪಸ್ಥಿತರಿದ್ದರು.