ಶಿವಮೊಗ್ಗ: ವಿಜಯದಶಮಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವತಿಯಿಂದ ಪಥಸಂಚಲನ ವಿಜೃಂಭಣೆಯಿಂದ ನೆರವೇರಿತು. ಶಿವಮೊಗ್ಗ ನಗರದ 38 ಶಾಖೆಗಳಿಂದ ಆಗಮಿಸಿದ್ದ 5,000 ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಶಿಸ್ತಿನಿಂದ ಹೆಜ್ಜೆಗಳನ್ನಿಟ್ಟು ಮೆರವಣಿಗೆಯಲ್ಲಿ ಸಾಗಿದರು. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಎರಡು ತಂಡ, ಗೋಪಿ ಸರ್ಕಲ್ನಲ್ಲಿ ಸಂಗಮ
ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಿಂದ ಒಂದು ತಂಡ ಹಾಗೂ ಫ್ರೀಡಂ ಪಾರ್ಕ್ನಿಂದ ಮತ್ತೊಂದು ಸ್ವಯಂಸೇವಕರ ತಂಡ ಪಥಸಂಚಲನ ಆರಂಭಿಸಿತು. ಈ ಎರಡೂ ತಂಡಗಳು ಗೋಪಿ ವೃತ್ತದಲ್ಲಿ ಒಂದಾಗಿ, ಆನಂತರ ಎನ್ಇಎಸ್ ಮೈದಾನದವರೆಗೆ ಒಟ್ಟಾಗಿ ಮೆರವಣಿಗೆ ನಡೆಸಿದವು. ಪಥಸಂಚಲನ ಪೂರ್ಣಗೊಂಡ ಬಳಿಕ ಎನ್ಇಎಸ್ ಮೈದಾನದಲ್ಲಿ ಬೌದ್ಧಿಕ ವರ್ಗ ನೆರವೇರಿತು.

ಆರ್ಎಸ್ಎಸ್ನ ಸಾಂಪ್ರದಾಯಿಕ ಗಣವೇಷ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದ ಒಂದೂವರೆ ವರ್ಷದ ಪುಟ್ಟ ಮಗು ಸಾರ್ವಜನಿಕರ ವಿಶೇಷ ಗಮನಸೆಳೆಯಿತು. ಮೆರವಣಿಗೆ ಸಾಗಿದ ಹಾದಿಯುದ್ದಕ್ಕೂ ಸಾರ್ವಜನಿಕರು ಗಣವೇಷಧಾರಿ ಸ್ವಯಂಸೇವಕರ ಮೇಲೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಸಂಸದ, ಶಾಸಕ, ಮಾಜಿ ಮಿನಿಸ್ಟರ್
ಪಥಸಂಚಲನದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮೆರವಣಿಗೆಯ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.