ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ತೀವ್ರ ಕುತೂಹಲ ಕೆರಳಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಬಿಜೆಪಿಯೊಳಗೆ ಮೇಯರ್ ಆಕಾಂಕ್ಷಿಗಳ ಬಿಗಿ ಪಟ್ಟು, ಮುಖಂಡರಿಗೆ ತೀವ್ರ ತಲೆ ನೋವು ತಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿಸಿಎಂ (ಬಿ) ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದೆ. ಬಿಜೆಪಿಯೊಳಗೆ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಈವರೆಗೂ ಮೇಯರ್ ಚುನಾವಣೆಗೆ ಸ್ಪರ್ಧಿಸಲು ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿಕೊಂಡು ಬಂದಿದ್ದಾರೆ. ಇವತ್ತು ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಇಬ್ಬರು ಸ್ಪರ್ಧೆಗೆ ಸಿದ್ಧವಾಗಿರುವುದು ಬಿಜೆಪಿ ಮುಖಂಡರಿಗೆ ತಲೆ ನೋವು ತಂದಿದೆ.
ಅನಿತಾ ರವಿಶಂಕರ್’ಗೆ ಹಾದಿ ಸುಗಮ
ಬಿಜೆಪಿ ಕಾರ್ಪೊರೇಟರ್ ಅನಿತಾ ರವಿಶಂಕರ್ ಅವರ ಜಾತಿ ಪ್ರಮಾಣಪತ್ರ ರದ್ದುಗೊಳಿಸುವಂತೆ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ಈ ಹಂತದಲ್ಲಿ ಜಾತಿ ಪ್ರಮಾಣ ಪತ್ರ ರದ್ದುಗೊಳಿಸುವ ಅಧಿಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕೋರ್ಟಿನಲ್ಲೇ ಪ್ರಶ್ನೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಇದರಿಂದ ಅನಿತಾ ರವಿಶಂಕರ್ ಅವರು ಮೇಯರ್ ಚುನಾವಣೆಗೆ ಸ್ಪರ್ಧಿಸಲು ಇದ್ದ ಬಹುದೊಡ್ಡ ಅಡ್ಡಿ ನಿವಾರಣೆಯಾಗಿದೆ.
ಸುವರ್ಣ ಶಂಕರ್’ಗೂ ಕಡೆ ಕ್ಷಣದಲ್ಲಿ ರಿಲೀಫ್
ಮೇಯರ್ ಸ್ಥಾನಕ್ಕೆ ಬಿಜೆಪಿಯ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಸುವರ್ಣ ಶಂಕರ್. ಇವರ ಜಾತಿ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ರದ್ದುಗೊಳಿಸಿದ್ದರು. ಉಪ ವಿಭಾಗಾಧಿಕಾರಿ ಕ್ರಮದ ವಿರುದ್ಧ ಸುವರ್ಣ ಶಂಕರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಉಪ ವಿಭಾಗಾಧಿಕಾರಿ ಆದೇಶವನ್ನು ರದ್ದುಗೊಳಿಸಿದೆ. ಅಲ್ಲಿಗೆ ಸುವರ್ಣ ಶಂಕರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬಿಜೆಪಿ ಕಾರ್ಪೊರೇಟರ್’ಗಳು ಮೈಸೂರಿಗೆ ಶಿಫ್ಟ್
ಮೇಯರ್ ಸ್ಥಾನಕ್ಕೆ ಹಗ್ಗ ಜಗ್ಗಾಟ ನಡೆಯುತ್ತಿರುವ ನಡುವೆ ಬಿಜೆಪಿ ಕಾರ್ಪೊರೇಟರ್’ಗಳು ಒಗ್ಗಟ್ಟಾಗಿರಲು ನಿರ್ಧರಿಸಿ, ಮೈಸೂರಿಗೆ ತೆರಳಿದ್ದಾರೆ. ಜ.27ರಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ಇವತ್ತು ಬೆಳಗ್ಗೆ ಕಾರ್ಪೊರೇಟರರ್’ಗಳು ಒಟ್ಟಾಗಿ ಶಿವಮೊಗ್ಗಕ್ಕೆ ಆಗಮಿಸಲಿದ್ದದು, ಚುನಾವಣಗೂ ಒಟ್ಟಿಗೆ ಬರಲಿದ್ದಾರೆ.
ಚುನಾವಣೆಗು ಮೊದಲು ಮಹತ್ವದ ಸಭೆ
ಮೇಯರ್ ಚುನಾವಣೆ ಸಂಬಂಧ ಬಿಜೆಪಿಯೊಳಗೆ ಉಂಟಾಗಿರುವ ಗೊಂದಲ ನಿವಾರಿಸಲು ಇವತ್ತು ಬಿಜೆಪಿ ಪಕ್ಷ ಮಹತ್ವದ ಸಭೆ ಕರೆದಿದೆ. ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಕಾಂಕ್ಷಿಗಳು ಕಾನೂನು ಸಮರ ನಡೆಸುತ್ತಿದ್ದ ಕಾರಣಕ್ಕೆ, ಮುಖಂಡರು ಸಭೆ ನಡೆಸುವ ಗೋಜಿಗೆ ಕೈ ಹಾಕಿರಲಿಲ್ಲ. ಈಗ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಹೊಣೆ ಪಕ್ಷದ್ದಾಗಿದೆ. ಇದೇ ಕಾರಣಕ್ಕೆ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಅದೃಷ್ಟ ಪರೀಕ್ಷೆಗೆ ಇಳಿದ ಕಾಂಗ್ರೆಸ್ ಪಕ್ಷ
ಬಿಜೆಪಿಯ ಒಳ ಜಗಳದಲ್ಲಿ ಕಾಂಗ್ರೆಸ್ ಪಕ್ಷ ಅದೃಷ್ಟ ಪರೀಕ್ಷೆಗೆ ಕೈ ಹಾಕಿದೆ. ಬಿಸಿಎಂ (ಬಿ) ವರ್ಗಕ್ಕೆ ಸೇರಿದ ಯಮುನಾ ರಂಗೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಕಾನೂನು ಸಮರದಲ್ಲಿ ಬಿಜೆಪಿಗೆ ಸೋಲಾದರೆ, ಕಾಂಗ್ರೆಸ್ ಕಾರ್ಪೊರೇಟರ್’ಗೆ ಪಾಲಿಕೆಯಲ್ಲಿ ಅದೃಷ್ಟ ಒಲಿಯುವ ಸಂಭವವಿತ್ತು.
ಯಾರಾಗ್ತಾರೆ ಉಪ ಮೇಯರ್?
ಮೇಯರ್ ಸ್ಥಾನದ ಪೈಪೋಟಿ ನಡುವೆ ಉಪ ಮೇಯರ್ ಸ್ಥಾನಕ್ಕೂ ಪ್ರಬಲ ಲಾಬಿ ನಡೆಯುತ್ತಿದೆ. ಸಾಮಾನ್ಯ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿದೆ. ಹಾಗಾಗಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇವತ್ತು ನಡೆಯುವ ಸಭೆಯಲ್ಲಿ ಉಪ ಮೇಯರ್ ಸ್ಥಾನಕ್ಕೂ ಅಭ್ಯರ್ಥಿ ಫೈನಲ್ ಮಾಡಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಅಚ್ಚರಿಯ ಅಭ್ಯರ್ಥಿ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಯಾರಿಗೆಷ್ಟಿದೆ ಸಂಖ್ಯಾ ಬಲ?
ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತವಿದೆ. 35 ಸದಸ್ಯರ ಪಾಲಿಕೆಯಲ್ಲಿ, ಬಿಜೆಪಿಯ 20 ಸದಸ್ಯರಿದ್ದಾರೆ. ಕಾಂಗ್ರೆಸ್’ನ 7, ಪಕ್ಷೇತರರು 6 ಮತ್ತು ಜೆಡಿಎಸ್’ನ ಇಬ್ಬರು ಸದಸ್ಯರಿದ್ದಾರೆ. ಇವತ್ತು ಬೆಳಗ್ಗೆ 11.30ರಿಂದ ಮೇಯರ್ ಚುನಾವಣೆ ನಡೆಯಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]