NEWS HIGHLIGHTS
ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ಬಳಿ ಬಿ.ಹೆಚ್.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕಂಪ್ಯೂಟರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟು ಕರಕಲಾಗಿವೆ.
ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಬ್ಯಾಂಕ್ ತೆರೆದಾಗ ಈ ದುರಂತ ಬೆಳಕಿಗೆ ಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಎಲ್ಲವು ಸುಟ್ಟು ಕರಕಲು
ಬೆಂಕಿಯ ಕೆನ್ನಾಲಿಕೆಗೆ ಬ್ಯಾಂಕ್‌ನಲ್ಲಿದ್ದ ಕಂಪ್ಯೂಟರ್‌ಗಳು, ಏರ್ ಕೂಲರ್‌ಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಆಹುತಿಯಾಗಿವೆ. ಇದರೊಂದಿಗೆ ಕಚೇರಿಯಲ್ಲಿದ್ದ ಕೆಲವು ಪ್ರಮುಖ ದಾಖಲೆಗಳು ಕೂಡ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.