ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 14 JUNE 2023
SHIMOGA : ಮುಂಗಾರು ತಡವಾಗಿದ್ದು ಜಿಲ್ಲೆಯ ರೈತರಲ್ಲಿ ಆತಂಕ ಮೂಡಿದೆ. ಜಲಾಶಯಗಳ ನೀರಿನ ಮಟ್ಟ (Dam Water Level) ಇಳಿಕೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ, ಇನ್ನೊಂದು ತಿಂಗಳು ವಿವಿಧ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.
ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಜಿಲ್ಲೆಯಲ್ಲಿ ಪ್ರಮುಖ ಜಲಾಶಯಗಳನ್ನು ನಿರ್ಮಿಸಲಾಗಿದೆ. ಆದರೆ ಮುಂಗಾರು ವಿಳಂಬ, ಬಿಸಿಲಿನ ಝಳ ಹೆಚ್ಚಳದಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗಾಗಿ ಜಲಾಶಯದಲ್ಲಿ ಸದ್ಯ ಸಂಗ್ರಹವಾಗಿರುವ ನೀರನ್ನು ಕೃಷಿ, ವಿದ್ಯುತ್ ಉತ್ಪಾದನೆ ಬದಲು ಕುಡಿಯುವ ನೀರಿಗೆ ಮೀಸಲಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಯಾವ್ಯಾವ ಡ್ಯಾಂನಲ್ಲಿ ಹೇಗಿದೆ ಸ್ಥಿತಿ?
ಲಿಂಗನಮಕ್ಕಿ ಜಲಾಶಯ
ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಿಸಲಾಗಿದೆ. 1819 ಅಡಿ ಎತ್ತರದ ಜಲಾಶಯದಲ್ಲಿ ಪ್ರಸ್ತುತ 1742.95 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 1750 ಅಡಿಯಷ್ಟು ಇತ್ತು. ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಮಟ್ಟ (Dam Water Level) ಸಂಪೂರ್ಣ ಕುಸಿತ ಕಂಡಿದೆ.
ಶರಾವತಿ ನದಿಯಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ಮಡೆನೂರು ಡ್ಯಾಮ್ ಕಾಣಿಸುತ್ತಿದೆ. ಈ ಹಿಂದೆ ಮಹಾತ್ಮ ಗಾಂಧಿ ಜಲ ವಿದ್ಯುದಾಗಾರ ಯೋಜನೆಯಲ್ಲಿ ಈ ಜಲಾಶಯ ಮುಳುಗಿತ್ತು. ಇನ್ನು, ಸಿಗಂದೂರು ಲಾಂಚ್‌ನಲ್ಲಿ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಲಾಂಚ್ ಸೇವೆಯೆ ಸ್ಥಗಿತಗೊಳ್ಳುವ ಆತಂಕವಿದೆ.
ಭದ್ರಾ ಜಲಾಶಯ
ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ 9 ಟಿಎಂಸಿಯಷ್ಟು ಕಡಿಮೆ ಇದೆ. ಭದ್ರಾ ಡ್ಯಾಂ 71.54 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಇದೆ ದಿನ 34.88 ಟಿಎಂಸಿ ನೀರಿತ್ತು. ಈ ವರ್ಷ 25.08 ಟಿಎಂಸಿಯಷ್ಟು ನೀರಿದೆ. ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಹರಿವು ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಮಳೆಯಾಗಿರುವುದರಿಂದ ತೋಟಗಾರಿಕೆ ಬೆಳೆಗಳಿಗೆ ತೊಂದರೆ ಇಲ್ಲ.
ಈಗ ಭದ್ರಾ ಜಲಾಶಯದಲ್ಲಿರುವ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತಿದೆ. ಕಡೂರು, ಬೀರೂರು, ತರೀಕೆರೆ ಭಾಗದ ಸುಮಾರು 900 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೆ ಕೊರತೆ ಇಲ್ಲ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿತುಂಗಾ ಜಲಾಶಯ
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಒದಗಿಸುವ ತುಂಗಾ ಜಲಾಶಯದಲ್ಲಿಯು ನೀರಿನ ಕೊರತೆ ಎದುರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4 ಮೀಟರ್‌ನಷ್ಟು ನೀರು ಕಡಿಮೆ ಇದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ವೇಳಾಪಟ್ಟಿಯಂತೆ ಹಿಂಗಾರು ಹಂಗಾಮಿಗೆ ನೀರು ಹರಿಸಲಾಗಿದೆ. ಉಳಿದಿರುವ ನೀರು ಶಿವಮೊಗ್ಗ ನಗರಕ್ಕೆ ಕುಡಿಯಲು ಪೂರೈಕೆ ಮಾಡಬೇಕಿದೆ.
ಇದನ್ನೂ ಓದಿ – ಸಿಗಂದೂರು ಲಾಂಚ್, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ಸಮಸ್ಯೆ ನಿಶ್ಚಿತ, ವಾಹನಗಳಿಗೆ ಇಲ್ಲಿದೆ ಪರ್ಯಾಯ ಮಾರ್ಗ
ಪ್ರತಿದಿನ ಶಿವಮೊಗ್ಗ ನಗರಕ್ಕೆ ಕುಡಿಯಲು 4 ಕೋಟಿ ಲೀಟರ್ ನೀರು ಬೇಕು. ಮುಂಗಾರು ವಿಳಂಬ ಹಿನ್ನೆಲೆ ಎರಡು ದಿನಕ್ಕೊಮ್ಮೆ ನಗರದಲ್ಲಿ ನೀರು ಪೂರೈಕೆಗೆ ಅನುಮತಿ ಕೋರಿ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇನ್ನು, ಶಿಕಾರಿಪುರ ತಾಲೂಕು ಅಂಜನಾಪುರ ಜಲಾಶಯದಲ್ಲು ನೀರಿನ ಕೊರತೆ ಉಂಟಾಗಿದೆ. ಹಾಗಾಗಿ ಶಿರಾಳಕೊಪ್ಪಕ್ಕೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಂಬ್ಲಿಗೊಳ ಜಲಾಶಯವು ಸಂಪೂರ್ಣ ಖಾಲಿಯಾಗಿದೆ.
ಈ ಹೊತ್ತಿಗಾಗಲೆ ಮುಂಗಾರು ಆರಂಭವಾಗಿ ಬಿರುಸು ಪಡೆಯಬೇಕಿತ್ತು. ಆದರೆ ಜೂನ್ ತಿಂಗಳ ಅರ್ಧ ಭಾಗ ಕಳೆದರೂ ಮಳೆ ಇಲ್ಲದಿರುವುದು ಜಿಲ್ಲೆಯ ರೈತರಿಗೆ ಆತಂಕ ಮೂಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422