ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಗಳು ಆಯೋಜಿಸಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ. ವಿವಿಧ ತಾಲೂಕುಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ
ಯಾವ್ಯಾವ ದಿನ ಎಲ್ಲೆಲ್ಲಿ ಸ್ಪರ್ಧೆ?
ವಿವಿಧ ತಾಲೂಕುಗಳ ನಿಗದಿತ ಮೈದಾನಗಳಲ್ಲಿ ಕ್ರೀಡಾಕೂಟಗಳು ಜರುಗಲಿವೆ. ಆಗಸ್ಟ್ 30 ರಂದು ಸಾಗರದ ನೆಹರೂ ಮೈದಾನ ಹಾಗೂ ಸೊರಬದ ತಾಲೂಕು ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೆಪ್ಟೆಂಬರ್ 1 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣ ಹಾಗೂ ಸೆಪ್ಟೆಂಬರ್ 3 ರಂದು ಶಿಕಾರಿಪುರದ ತಾಲೂಕು ಕ್ರೀಡಾಂಗಣದಲ್ಲಿ ಪಂದ್ಯಗಳು ಇರಲಿವೆ. ಸೆಪ್ಟೆಂಬರ್ 4 ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಹೊಸನಗರದ ತಾಲೂಕು ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೆಪ್ಟೆಂಬರ್ 6 ರಂದು ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಜರುಗಲಿದೆ.

ಯಾವ್ಯಾವ ಸ್ಪರ್ಧೆಗಳು ಇರಲಿವೆ?
ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಮತ್ತು ಯೋಗಾಸನ ಸ್ಪರ್ಧೆಗಳು ಮಾತ್ರ ಇರಲಿವೆ. ವೈಯಕ್ತಿಕ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಗುಂಪು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಪ್ರತಿ ಕ್ರೀಡಾಪಟು ಗರಿಷ್ಠ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನೆಲ್ಲ ನಿಯಮಗಳಿವೆ?
ಕ್ರೀಡಾಪಟುಗಳು ನಿಗದಿತ ದಿನ ಬೆಳಿಗ್ಗೆ 9:30ರ ಒಳಗೆ ಮೂಲ ಆಧಾರ್ ಕಾರ್ಡ್ ತಂದು ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆ ಸಮಯದೊಳಗೆ ನೋಂದಾಯಿಸಿದವರಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಮತ್ತು ಉಪಹಾರದ ವ್ಯವಸ್ಥೆ ಆಗಲಿದೆ. ಆಯಾ ತಾಲೂಕಿನ ಆಟಗಾರರು ತಮ್ಮ ತಾಲೂಕಿನಲ್ಲಿ ಮಾತ್ರ ಸ್ಪರ್ಧಿಸಬೇಕು. ಬೇರೆ ತಾಲೂಕಿನಲ್ಲಿ ಆಡುವುದಾದರೆ ಅಲ್ಲಿ ಶಿಕ್ಷಣ ಪಡೆಯುತ್ತಿರಬೇಕು. ನಿಯಮ ಮೀರಿ ಬೇರೆ ತಾಲೂಕಿನವರನ್ನು ಆಡಿಸಿದರೆ ಅಂತಹ ತಂಡವನ್ನು ಅನರ್ಹಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.