ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಶ್ರೀ ರಾಮನವಮಿಯನ್ನು ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಿವಿಧೆಡೆ ವಿಶೇಷ ಪೂಜೆ, ರಥೋತ್ಸವಗಳನ್ನು ನಡೆಸಲಾಯಿತು. ಎಲ್ಲೆಲ್ಲಿ ಹೇಗಿತ್ತು ಪೂಜೆ? ಇದರ ವಿವರ ಇಲ್ಲಿದೆ.
ರಾಮಚಂದ್ರಾಪುರದಲ್ಲಿ ರಥೋತ್ಸವ, ಕಲ್ಯಾಣೋತ್ಸವ
HOSANAGARA : ಶ್ರೀ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವದ ಹಿನ್ನೆಲೆ ಶ್ರೀರಾಮ ದೇವರ ರಥಾರೋಹಣ ನಡೆಯಿತು. ಸುಡು ಬಿಸಿಲನ್ನೂ ಲೆಕ್ಕಿಸದೆ ಭಕ್ತರು ರಥ ಎಳೆದರು. ರಾಜ್ಯದ ವಿವಿಧೆಡೆಯಿಂದ ಮಠದ ಭಕ್ತರು ಆಗಮಿಸಿದ್ದರು. ಇನ್ನು, ರಾಮೋತ್ಸವದಲ್ಲಿ ಈ ಬಾರಿ ಆಯೋಜಿಸಿದ್ದ ಸೀತಾ ಕಲ್ಯಾಣೋತ್ಸವ ವಿಶೇಷವಾಗಿತ್ತು. ರಾಮನ ದಿಬ್ಬಣ ಮತ್ತು ಸೀತಾ ದಿಬ್ಬಣಿಗರಾಗಿ ಎರಡೂ ಕಡೆ ತಲಾ 200 ದಂಪತಿ ಸಾಂಪ್ರಾದಾಯಿಕ ಧಿರಿಸು ತೊಟ್ಟು ಬಂದಿದ್ದರು. ಸೀತಾರಾಮನ ವಿವಾಹ ಸಂದರ್ಭ ವಿಶೇಷ ರೀತಿಯಲ್ಲಿ ಸವತ್ಸ ಗೋದಾನ ಸೇರಿ ಆಭರಣ ಸೇವಾ ದಾನಗಳು ನಡೆಯಿತು.
ಶಿವಮೊಗ್ಗ ನಗದರಲ್ಲಿ ರಾಮ ನವಮಿ
SHIMOGA : ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ದುರ್ಗಿಗುಡಿ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯಿತು. ಎಪಿಎಂಸಿ ಮುಂಭಾಗ ಆಟೊ ಚಾಲಕರು ಹಾಗೂ ಆಂಜನೇಯ ಸ್ವಾಮಿ ಸೇವಾ ಸಮಿತಿಯಿಂದ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ದುರ್ಗಿಗುಡಿಯ ಶನೇಶ್ಚರ ದೇವಸ್ಥಾನದ ಬಳಿ ದುರ್ಗಿಗುಡಿ ಮಿತ್ರಕೂಟದ ವತಿಯಿಂದ ನರಸಿಂಹ ಗಂಧದ ಮನೆ ನೇತೃತ್ವದಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ಹಂಚಲಾಯಿತು. ವಿನೋಬ ನಗರದ ಪೊಲೀಸ್ ಚೌಕಿ, ಸೂಡಾ ಗೆಳೆಯರ ಬಳಗದಿಂದ ಶ್ರೀರಾಮ ನವಮಿ ಅಂಗವಾಗಿ ಸಾರ್ವಜನಿಕರಿಗೆ ಕೋಸಂಬರಿ–ಪಾನಕ ವಿತರಣೆ ಮಾಡಲಾಯಿತು. ಬಸವನಗುಡಿಯ ರಾಮ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿತು.
ರಿಪ್ಪನ್‌ಪೇಟೆಯಲ್ಲಿ ರಾಮೋತ್ಸವ
RIPPONPETE : ಇಲ್ಲಿನ ಜಿ.ಎಸ್.ಬಿ ಸಮಾಜದಲ್ಲಿ ವಿಜೃಂಭಣೆಯ ರಾಮೋತ್ಸವ ನಡೆಯಿತು. ತೀರ್ಥಹಳ್ಳಿಯ ಚಿಟ್ಟೆಕೊಪ್ಪದ ಪುರೋಹಿತ ಗುರುರಾಜ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಮಹಿಳಾ ಮಂಡಳಿಯಿಂದ ರಾಮ ತಾರಕ ಮಂತ್ರ, ಭಜನೆ ಕಾರ್ಯಕ್ರಮಗಳು ಜರುಗಿದವು. ಪಾನಕ, ಕೋಸಂಬರಿ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಭದ್ರಾವತಿಯಲ್ಲಿ ರಾಜಬೀದಿ ಉತ್ಸವ
BHADRAVATHI : ಹಳೆ ನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ, ಭಕ್ತಿಯಿಂದ ರಾಮನವಮಿ ಆಚರಿಸಲಾಯಿತು. ದೇವರ ರಾಜಬೀದಿ ಉತ್ಸವ ನಡೆಯಿತು. ದೇಗುಲದ ಭಕ್ತರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಪಾನಕ, ಕೋಸಂಬರಿ ಹಂಚಲಾಯಿತು.
ಹೊಳೆಹೊನ್ನೂರಿನಲ್ಲಿ ವಿಶೇಷ ಪೂಜೆ
HOLEHONNURU : ಪೇಟೆ ಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ನವಮಿ ಆಚರಿಸಲಾಯಿತು. ಶ್ರೀರಾಮ ದೇವರಿಗೆ ಪುಣ್ಯತೀರ್ಥ ಮಜ್ಜನ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಪ್ರಸಾದ ನೈವೇದ್ಯ, ಮಹಾ ಮಂಗಳಾರತಿ ಮಾಡಲಾಯಿತು. ಶ್ರೀರಾಮ ಪ್ರವಚನ ನಡೆಯಿತು.
ಸೊರಬದಲ್ಲಿ ಪಲ್ಲಕ್ಕಿ ಉತ್ಸವ
SORABA : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ಸೀತಾರಾಮಚಂದ್ರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ನಗರದ ವಿವಿಧೆಡೆ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಭಕ್ತರು ಭಾಗಿಯಾಗಿ ದೇವರನ್ನು ಪ್ರಾರ್ಥಿಸಿದರು.
ಇದನ್ನೂ ಓದಿ – ಲಾರಿ ಡಿಕ್ಕಿ, ಭದ್ರಾವತಿಯಲ್ಲಿ ರೈಲ್ವೆ ಹಳಿ ಏರುಪೇರು, ಜನಶತಾಬ್ದಿ ಸೇರಿ 2 ರೈಲು ಎರಡು ಗಂಟೆ ವಿಳಂಬ