ನಾಟಿ ಮದ್ದು ತಂದ ಆಪತ್ತು
ಚಾಮರಾಜನಗರ: ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನೊಬ್ಬ ನಾಟಿ ಮದ್ದಿನ ಮೊರೆ ಹೋಗಿ ಇದೀಗ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅನೂಪ್ ಎಂಬಾತನೇ ತನ್ನೆರಡೂ ಕಿಡ್ನಿಗಳನ್ನು ಕಳೆದುಕೊಂಡ ಯುವಕ. ನಾಟಿ ಮದ್ದು ಸೇವಿಸಿದ್ದ ಈತನಿಗೆ ಇದ್ದಕ್ಕಿಂದ್ದಂತೆ ವಾಂತಿ ಶುರುವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ ಯುವಕನ ಎರಡೂ ಕಿಡ್ನಿ ವೈಫಲ್ಯವಾಗಿರೋದು ಬೆಳಕಿಗೆ ಬಂದಿದೆ.
ಸರಣಿ ಅಪಘಾತ, ಇಬ್ಬರು ಸಾವು
ತುಮಕೂರು: ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಅರಳಗುಡಿ ಗ್ರಾಮದ ಭೀಮಾಬಾಯಿ (70), ಮಹಾಂತಪ್ಪ (50) ಮೃತ ದುರ್ದೈವಿಗಳು. ಅಪಘಾತ ಹಿನ್ನೆಲೆ ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ರು. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ಲೈವ್.ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಗಾಯಾಳು ವಿದ್ಯಾರ್ಥಿಗೆ ನೆರವಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ನರಳಾಡುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೆರವಾದ ದೃಶ್ಯ ಇಂದು ಉಡುಪಿಯಲ್ಲಿ ಕಂಡುಬಂದಿದೆ. ಕಾರ್ಯಕ್ರಮ ನಿಮಿತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯತ್ತ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಕಾಪು ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ರಸ್ತೆಯಲ್ಲೇ ವಿದ್ಯಾರ್ಥಿ ನರಳಾಡುತ್ತಿದ್ದ. ಇದನ್ನು ಕಂಡ ಸಚಿವೆ ಕಾರನ್ನು ನಿಲ್ಲಿಸಿ, ವಿದ್ಯಾರ್ಥಿಯನ್ನು ಉಪಚರಿಸಿ, ಬಳಿಕ ಅಲ್ಲಿಯೇ ನಿಂತಿದ್ದ ಆಟೋವೊಂದರಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಚಿವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ
ವಿಜಯಪುರ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಬೇಸತ್ತ ಪತಿ ತನ್ನ ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಭೀರಣ್ಣ ಎಂಬಾತ ತನ್ನ ಮೂವರು ಮಕ್ಕಳಿಗೆ ವಿಷ ಕೊಟ್ಟು ತಾನು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮತ್ತೊಬ್ಬ ಮಗ ಬದುಕುಳಿದಿದ್ದಾನೆ. ಘಟನೆ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ತುಂಬಾ ಹೊಗೆ: ಆತಂಕಕ್ಕೊಳಗಾದ ರಾಯರ ಭಕ್ತರು
ರಾಯಚೂರು: ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಬಸ್‌ನಲ್ಲಿ ಇದ್ದಕ್ಕಿದ್ದ ಹಾಗೇ ಬಸ್ ತುಂಬಾ ಹೊಗೆ ಆವರಿಸಿ ಪ್ರಯಾಣಿಕರು ಆತಂಕಗೊಂಡ ಘಟನೆ ಇಂದು ನಡೆದಿದೆ. ರಾಯರ ಆರಾಧನಾ ಮಹೋತ್ಸವಕ್ಕೆ ಭಕ್ತರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕೆಟ್ಟು ನಿಂತಿದೆ. ಹಳೆಯದಾದ ಬಸ್‌ನ ಅಸಮರ್ಪಕ ನಿರ್ವಹಣೆಯಿಂದ ಬಸ್ ನಲ್ಲಿ ಹೊಗೆ ಆವರಿಸಿದೆ. ಬಳಿಕ ಮನೆಯೊಂದರಿಂದ ಬಸ್ ಚಾಲಕ ನೀರನ್ನ ತಂದು ರೇಡಿಯೇಟರ್‌ಗೆ ಸುರಿದಿದ್ದಾನೆ. ಘಟನೆಯಿಂದ ಪ್ರಯಾಣಿಕರು ಭಯಭೀತರಾಗಿದ್ದು ಸಾರಿಗೆ ಇಲಾಖೆ ವಿರುದ್ಧ ಹಿಡಿಶಾಪ ಹಾಕಿದ್ರು.
ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಗೋವಾ ಮದ್ಯ ಸಾಗಾಟ
ಬೆಳಗಾವಿ: ಪುಷ್ಪ ಸಿನಿಮಾ ಸ್ಟೈಲ್ನಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನ ವಶಕ್ಕೆ ಪಡೆದ ಬೆಳಗಾವಿಯ ಅಬಕಾರಿ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಲಾರಿ ತಡೆದ ಪೊಲೀಸರು ಸುಮಾರು 3 ಲಕ್ಷ ಮೌಲ್ಯದ ಗೋವಾದ ಮದ್ಯದ ಬಾಟೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಕೆ.ಎಲ್. ರಾಹುಲ್ ದಂಪತಿ
ಬೆಂಗಳೂರು ಗ್ರಾಮಾಂತರ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಇಂದು ತಮ್ಮ ಪತ್ನಿ ಅತಿಯಾ ಶೆಟ್ಟಿಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದಂಪತಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ವಾಪಸಾಗಿದ್ದಾರೆ.
ಮುಂದುವರಿದ ಕಾವೇರಿ ಕಿಚ್ಚು
ಮಂಡ್ಯ: ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ರಾಜ್ಯ ರೈತ ಸಂಘದ ಕಾರ್ಯಕರ್ತರು ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಬಳಿ ನಡೆದಿದೆ. ಈ ವೇಳೆ ತಮಿಳುನಾಡಿಗೆ ನೀರು ನಿಲ್ಲಿಸಿ, ರೈತರ ಪರ ನಿಲ್ಲಿ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದ್ರು.
ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ಜಿ.ಪರಮೇಶ್ವರ್
ಬೆಂಗಳೂರು: ಅನಾರೋಗ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿ ಕುಮಾರಸ್ವಾಮಿಯವರ ಅರೋಗ್ಯ ವಿಚಾರಿಸಿದ್ರು. ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್ ಕುಮಾರಸ್ವಾಮಿಯವರ ಅದೃಷ್ಟ ಚೆನ್ನಾಗಿತ್ತು ಅಂತಲೇ ಹೇಳಬೇಕು. ಯಾಕೆಂದರೆ 4 ದಿನಗಳ ಹಿಂದೆ ಅವರಿಗೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸದಿದ್ದರೆ ಹೆಚ್ಚಿನ ಅಪಾಯದ ಸಾಧ್ಯತೆ ಇತ್ತು ಎಂದು ಹೇಳಿದ್ರು.
ತೀರ್ಪಿನ ಕಾಪಿ ಬಂದಮೇಲೆ ನೋಡುತ್ತೇವೆ
ಹಾಸನ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹಗೊಂಡ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ತೀರ್ಪಿನ ಕಾಪಿ ಬಂದಮೇಲೆ ಅದೇನಾಗಿದೆ ಎಂದು ನೋಡುತ್ತೇವೆ. ತೀರ್ಪಿನ ಕಾಪಿ ನೋಡಿದ ಮೇಲೆ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ನನಗೆ ಯಾವ ಸೂಚನೆಯೂ ಬಂದಿಲ್ಲ. ಕಾನೂನಿಗೆ ನಾವೆಲ್ಲ ತಲೆಬಾಗಬೇಕು, ಆ ರೀತಿ ನಾವು ಇದ್ದೇವೆ. ಮುಂದೆ ಏನು ಮಾಡಬೇಕು ವಕೀಲರ ಜೊತೆ ಚರ್ಚೆ ಮಾಡ್ತೇವೆ ಎಂದು ಹೇಳಿದ್ರು.
ಇದನ್ನೂ ಓದಿ – ವಿದ್ಯಾರ್ಥಿ ಬ್ಯಾಗಿನಲ್ಲಿ ನಾಗರ ಹಾವು, ಸಹಪಾಠಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತು